ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ತೀರ್ಮಾನಿಸಿದ್ದು ಫೆಬ್ರವರಿ 22ರಂದು ತೆರಳಲಿರುವ ಅವರು 8 ದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಸಿದ್ದರಾಮಯ್ಯನವರು ಶಾಂತಿವನಕ್ಕೆ ತೆರಳುತ್ತಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ತಮ್ಮ ಮುಂದಿನ ರಾಜಕೀಯ ನಡೆಗಳ ಬಗ್ಗೆ ಸಿದ್ಧತೆ ನಡೆಸುವ ಸಲುವಾಗಿ ಸಿದ್ದರಾಮಯ್ಯ ಶಾಂತಿವನಕ್ಕೆ ತೆರಳುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ ನಡೆದ ಕುರುಬ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿರಲಿಲ್ಲ. ಕುರುಬ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಸಿದ್ದರಾಮಯ್ಯನವರು ಈ ಹೋರಾಟದ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂಬ ಕಾರಣಕ್ಕೆ ಇದರಿಂದ ಹಿಂದೆ ಸರಿದಿದ್ದರೆಂದು ಹೇಳಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಹಿಂದ ಚಳುವಳಿಗೆ ಮತ್ತೆ ಚಾಲನೆ ನೀಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ತಯಾರಾಗಲು ಪ್ರಕೃತಿ ಚಿಕಿತ್ಸೆಗೆ ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
SHOCKING: ಕರ್ನಾಟಕ ರಾಜ್ಯವೊಂದರಲ್ಲೇ ಇವೆ ಇಷ್ಟೊಂದು ಗುಜರಿ ವಾಹನಗಳು
ಶಾಂತಿವನದ ವಾಸ್ತವ್ಯದ ವೇಳೆ ಸಿದ್ದರಾಮಯ್ಯನವರು ತಮ್ಮ ಆಪ್ತರೊಂದಿಗೆ ರಾಜಕೀಯ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಹೀಗಾಗಿಯೇ ಸಿದ್ದರಾಮಯ್ಯನವರು ತಮ್ಮ ಆಪ್ತ ಮಾಜಿ ಸಚಿವ ಮಹದೇವಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆನ್ನಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗಾಗಿ ವಾಸ್ತವ್ಯ ಹೂಡಿದ್ದ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದು, ಈ ವೇಳೆ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಮೈತ್ರಿ ಸರ್ಕಾರದ ಕುರಿತು ಆಡಿದ ಮಾತು ಬಹಿರಂಗವಾಗಿ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯನವರ ಈ ಬಾರಿಯ ವಾಸ್ತವ್ಯ ಮತ್ಯಾವ ರಾಜಕೀಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.