ಉಕ್ರೇನ್ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿಯ ಮೃತದೇಹವನ್ನು ಭಾರತಕ್ಕೆ ಕರೆತರುವ ವಿಚಾರವಾಗಿ ‘ಮೃತದೇಹವು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ’ಎಂಬ ಬಿಜೆಪಿಯ ಶಾಸಕ ಅರವಿಂದ ಬೆಲ್ಲದ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್, ಕ್ರೌರ್ಯವು ಕೇಸರಿ ಪಕ್ಷದ ಡಿಎನ್ಎ ಎಂದು ಕಿಡಿಕಾರಿದೆ. ಅಲ್ಲದೇ ಯುದ್ಧ ಪೀಡಿತ ಸ್ಥಳದಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ನೆಪದಲ್ಲಿ ಕೇಂದ್ರ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ತಿದೆ ಎಂದು ಆರೋಪಿಸಿದೆ.
ಮಾರ್ಚ್ 1ರಂದು ಹಾವೇರಿ ಮೂಲದ ಭಾರತೀಯ ವಿದ್ಯಾರ್ಥಿ ನವೀನ್ ಎಸ್ ಜೆ ಉಕ್ರೇನ್ನಲ್ಲಿ ರಷ್ಯಾದ ದಾಳಿಯಿಂದ ಹತರಾಗಿದ್ದರು. ಖಾರ್ಕಿವ್ನಲ್ಲಿ ತನಗಾಗಿ ಆಹಾರವನ್ನು ತರಲು ಅಂಗಡಿಗೆ ತೆರಳಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು.
ಅಹಂಕಾರವನ್ನೇ ಕುಡಿದಿರುವ ಹೃದಯ ಹೀನ ಬಿಜೆಪಿ ನಾಯಕರ ತಲೆಗೆ ಅಧಿಕಾರದ ಮದವೇರಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳನ್ನು ನೀಟ್ನಲ್ಲಿ ಫೇಲ್ ಆದವರು ಎಂದು ಕರೆಯುತ್ತಾರೆ. ಅರವಿಂದ್ ಬೆಲ್ಲದ್ ಅಂತೂ ತಮ್ಮ ಸಮತೋಲನವನ್ನೇ ಕಳೆದುಕೊಂಡಿದ್ದಾರೆ. ಅಸೂಕ್ಷ್ಮತೆ ಹಾಗೂ ಕ್ರೌರ್ಯ ಬಿಜೆಪಿಯ ಡಿಎನ್ಎ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.