ಮಳೆಗಾಲದಲ್ಲಿ ಕೊಡಗಿನ ಪ್ರಕೃತಿ ಸೌಂದರ್ಯ ನೋಡೋದೇ ಒಂದು ಚಂದ. ಎಂತಹ ಚಿಂತೆಯನ್ನೂ ಮರೆಸುವ ಶಕ್ತಿ ಪ್ರಕೃತಿಗೆ ಇದೆ. ಎಷ್ಟೋ ಮಂದಿ ಕೊಡಗಿನ ಅನೇಕ ಸ್ಥಳಗಳನ್ನು ನೋಡಲು ಮಳೆಗಾಲವನ್ನು ಕಾಯುತ್ತಾರೆ. ಆದರೆ ಈ ವರ್ಷ ಮಾತ್ರ ಮುಂಗಾರಿಗೂ ಮುನ್ನವೇ ಕೊಡಗು ಜನಕ್ಕೆ ಪ್ರಕೃತಿಯ ಸೌಂದರ್ಯ ಲಭಿಸಿದೆ.
ಹೌದು, ನಿಸರ್ಗ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಮಳೆ ಗಾಳಿ ಜೋರಾಗಿದೆ. ಹೀಗಾಗಿ ಕೊಡಗಿನಲ್ಲೂ ತುಂತುರು ಮಳೆ ಪ್ರಾರಂಭವಾಗಿದ್ದು, ಮಂಜು ಕವಿದ ವಾತಾವರಣ ನಿರ್ಮಾಣವಾಗಿದೆ. ಮುಂಗಾರಿಗೂ ಮುನ್ನವೇ ಕೊಡಗು-ಮಡಿಕೇರಿ ಫುಲ್ ಕೂಲ್ ಆಗಿದೆ.
ಮಂಜು ಹೆಚ್ಚಾಗಿ ಇರುವುದರಿಂದ ಈ ಭಾಗದಲ್ಲಿ ಸೂಯಾಸ್ತಕ್ಕೂ ಮುನ್ನವೇ ಕತ್ತಲಾದಂತಿದೆ. ಅಲ್ಲದೆ ತುಂತುರು ಮಳೆಯಿಂದ ಮುಂಗಾರು ಆರಂಭವಾಯ್ತೇನೋ ಎಂಬ ಭಾಸವಾಗುತ್ತಿದೆ ಎನ್ನುತ್ತಿದ್ದಾರೆ ಅಲ್ಲಿನ ಜನತೆ.