
ಇಂತಹ ಸಂದರ್ಭದಲ್ಲಿ ಕಂಗಾಲಾದ ವರ್ಗದ ಜನತೆಗೆ ಆಶಾಕಿರಣವಾಗಿದ್ದು ಡಾ. ರಾಜು. ತಮ್ಮ ವಿಡಿಯೋಗಳ ಮೂಲಕ ಕೊರೊನಾ ಎಂಬ ಈ ಮಾರಿಯನ್ನು ಹೇಗೆಲ್ಲಾ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಹಣ ಸುಲಿಗೆ ಮಾಡಲು ಯಾವ್ಯಾವ ಮಾರ್ಗ ಅನುಸರಿಸಲಾಗುತ್ತಿದೆ ಎಂಬುದನ್ನು ಹಲವು ವಿಡಿಯೋಗಳಲ್ಲಿ ವಿವರಿಸಿದ್ದರು.
ಸ್ವತಃ ವೈದ್ಯರಾದರೂ, ಧನದಾಹಿ ವೈದ್ಯರ ನಿರ್ಲಜ್ಯ ನಡುವಳಿಕೆಯನ್ನು ಖಂಡಿಸಲು ಡಾ. ರಾಜು ಹಿಂದೇಟು ಹಾಕಿರಲಿಲ್ಲ. ಈಗ ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ಅಸಹಾಯಕ ಬಡ ಆಟೋ ಚಾಲಕನೊಬ್ಬ ಸಕಾಲಕ್ಕೆ ಚಿಕಿತ್ಸೆ ಸಿಗದೆ ಹೇಗೆ ಸಾವಿಗೀಡಾದರು ಎಂಬುದನ್ನು ಡಾ. ರಾಜು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದು, ಇದು ಮನ ಕಲಕುವಂತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ತಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ಪ್ರೀತಿಯಿಂದ ಸಾಕಿದ ತಂದೆಯ ಮುಖವನ್ನೂ ನೋಡಲು ಬಿಡದೆ ಅನಾಥರಂತೆ ಅವರ ಅಂತ್ಯಸಂಸ್ಕಾರ ಮಾಡಿದ ಕುರಿತು ಈ ಆಟೋ ಚಾಲಕನ ಮಕ್ಕಳು ಹೇಳಿದ ಘಟನೆಯನ್ನು ಹಂಚಿಕೊಂಡಿರುವ ಡಾ. ರಾಜು, ಇಂತಹ ಘಟನೆಗಳು ಮತ್ತೊಮ್ಮೆ ನಡೆಯಬಾರದೆಂದು ಹೇಳಿದ್ದಾರಲ್ಲದೇ ಒಂದೊಮ್ಮೆ ಯಾರಾದರೂ ಕೊರೊನಾದಿಂದ ಮೃತಪಟ್ಟಾಗ ಅವರ ಅಂತ್ಯಸಂಸ್ಕಾರಕ್ಕೆ ಯಾರೂ ಮುಂದೆ ಬಾರದಿದ್ದಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿ ಪಿಪಿಇ ಕಿಟ್ ಧರಿಸದೆ ಆಗಮಿಸಿ ಮುಂದಿನ ಕಾರ್ಯಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಆ ಮೂಲಕ ಕೊರೊನಾದಿಂದ ಮೃತಪಟ್ಟವರಿಗೆ ಒಂದು ಗೌರವವಯುತ ಅಂತಿಮ ವಿದಾಯ ಸಿಗಬೇಕು. ಜನರಲ್ಲಿ ಭಯ ಹುಟ್ಟಿಸುವ ಕೆಲಸ ಯಾರೂ ಮಾಡಬಾರದೆಂಬ ಸಂದೇಶ ಸಾರಿದ್ದಾರೆ.