ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವೈದ್ಯರು ಜಾಗೃತಿ ಮೂಡಿಸುವ ಹಾಗೂ ಧೈರ್ಯ ತುಂಬುವ ಹೆಸರಲ್ಲಿ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆಂಬ ಆರೋಪ ಈಗ ಬಡವರ ಪಾಲಿನ ಆಶಾಕಿರಣ ಡಾ. ರಾಜು ಕೃಷ್ಣಮೂರ್ತಿ ಅವರ ವಿರುದ್ದ ಕೇಳಿ ಬಂದಿದೆ.
ಕೊರೊನಾ ಎರಡನೇ ಅಲೆಯಲ್ಲಿ ಜನರಲ್ಲಿ ತಪ್ಪು ಸಂದೇಶ ರವಾನಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಡಾ. ರಾಜು ಅವರ ಕ್ಲಿನಿಕ್ ಲೈಸನ್ಸ್ ರದ್ದುಗೊಳಿಸಲು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶ ನೀಡಿದೆ.
ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಆಟೋ ಚಾಲಕ: ನಡೆದೇ ಹೋಯ್ತು ನಡೆಯಬಾರದ ಘಟನೆ
ಮಾಸ್ಕ್ ಹಾಗೂ ದೈಹಿಕ ಅಂತರ ಪಾಲನೆ ಕೊರೊನಾ ತಡೆಯಲು ಪ್ರಯೋಜನವಾಗಲ್ಲ. ಸ್ಯಾನಿಟೈಸರ್ ಬಳಕೆ ಅಪಾಯಕ್ಕೂ ಕಾರಣವಾಗಬಲ್ಲದು. ಎಲ್ಲಕ್ಕಿಂತ ಮುಖ್ಯ ರೋಗಿಗಳಿಗೆ ಧೈರ್ಯ ತುಂಬುವುದು ಮುಖ್ಯ ಎಂದು ಡಾ.ರಾಜು ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.
ಅಲ್ಲದೇ ಡಾ. ರಾಜು ಅವರ ಸಾಗರ್ ಕ್ಲಿನಿಕ್ ನಲ್ಲಿ ವೈದ್ಯರು, ಶುಶ್ರೂಷಕರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳು ಮಾಸ್ಕ್, ಸ್ಯಾನಿಟೈಸರ್ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು.
ಈ ಬಗ್ಗೆಯೂ ಸ್ಪಷ್ಟನೆ ನೀಡಿದ್ದ ಡಾ.ರಾಜು ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸರ್ ಇಲ್ಲದೇ ಸೋಂಕಿತರಿಗೆ ಚಿಕಿತ್ಸೆ ನೀಡುವುದು ನನ್ನ ವೈಯಕ್ತಿಕ ಆಯ್ಕೆ. ನಮ್ಮಲ್ಲಿ ಯಾರಿಗೂ ಅನಾರೋಗ್ಯ ಕಾಡುತ್ತಿಲ್ಲ, ಕೊರೊನಾ ವಿರುದ್ಧ ಹೋರಾಡಲು ಆತ್ಮವಿಶ್ವಾಸ, ಧೈರ್ಯ ಮಾತ್ರ ಮುಖ್ಯ ಎಂದು ಹೇಳಿದ್ದರು.
ಡಾ. ರಾಜು ಅವರ ಈ ಸಂದೇಶಗಳು ವೈರಲ್ ಆಗುತ್ತಿದ್ದಂತೆ ತಜ್ಞ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಮಾಸ್ಕ್ ಹಾಗೂ ಸೂಕ್ತ ಮುಂಜಾಗೃತಾ ಕ್ರಮವಿಲ್ಲದೇ ಸ್ವತಃ ವೈದ್ಯರು ರೋಗಿಗೆ ಚಿಕಿತ್ಸೆ ನೀಡುವುದು ಅಪಾಯಕಾರಿ, ಇದರಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಕಿಡಿಕಾರಿದ್ದರು.
ಇದರ ಬೆನ್ನಲ್ಲೇ ಇದೀಗ ಡಾ. ರಾಜು ಮೆಡಿಕಲ್ ಲೈಸನ್ಸ್ ರದ್ದು ಮಾಡಲಾಗಿದ್ದು, ಬೆಂಗಳೂರಿನ ಮೂಡಲಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್ ಗೆ ಬೀಗ ಹಾಕಲು ಆದೇಶಿಸಲಾಗಿದೆ.