ಹಾಸನ: ಕೊರೊನಾ ಲಸಿಕೆ ಕೊಡದೇ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಹಾಸನ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಸಿಗದೇ ಜನರು ಪರದಾಡುತ್ತಿದ್ದಾರೆ. ಹಲವು ಬಾರಿ ಸರ್ಕಾರಕ್ಕೆ ಒತ್ತಾಯಿಸಿದರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜಿಲ್ಲೆಯಲ್ಲಿನ ಸೋಂಕಿತರ ಸಾವನ್ನು ಕೂಡ ಅಧಿಕಾರಿಗಳು ಮುಚ್ಚಿಡುತ್ತಿದ್ದಾರೆ. ಸರ್ಕಾರದ ಧೋರಣೆ ಖಂಡಿಸಿ ನಾಳೆ ಬೆಳಿಗ್ಗೆಯಿಂದ ಸಿಎಂ ಮನೆ ಮುಂದೆ ಧರಣಿ ಕೂರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾ ಹೊತ್ತಲ್ಲಿ ದೇಶದ ಹಿತ ಮರೆತ ಮೋದಿಗೆ ಜನರಿಂದ ಕಪಾಳ ಮೋಕ್ಷ: ಹೆಚ್.ಕೆ. ಪಾಟೀಲ್
ಜಿಲ್ಲೆಗೆ ರೆಮ್ ಡಿಸಿವಿರ್ ಪೂರೈಕೆ ಮಾಡಬೇಕು. ನಾನು, ದೇವೇಗೌಡರು ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆರೋಗ್ಯ ಸಚಿವರಿಗೆ ಕರೆ ಮಾಡಿದರೆ ಫೋನ್ ರಿಸೀವ್ ಮಾಡುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಶ್ರೀಮಂತರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಬಡವರನ್ನು ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.