ಬೆಂಗಳೂರು: ಕೊರೊನಾ ಸೋಂಕಿನಿಂದ ಜನಪ್ರತಿನಿಧಿಗಳೇ ಬಳಲುತ್ತಿದಾರೆ. ತಮ್ಮ ಕುಟುಂಬ ಸದಸ್ಯರಿಗೇ ಆಸ್ಪತ್ರೆಗಳಲ್ಲಿ ಬೆಡ್ ಒದಗಿಸಲಾಗದೇ ಕಣ್ಣೀರುಡುತ್ತಿದ್ದಾರೆ. ರಾಜಕಾರಣಿಗಳ ಪರಿಸ್ಥಿತಿಯೇ ಹೀಗಾದರೆ ಇನ್ನು ಕೊರೊನಾ ಸೋಂಕಿಗೊಳಗಾದ ಸಾಮಾನ್ಯ ಜನರ ಪಾಡೇನು? ತನ್ನ ತಾಯಿ ಕೊರೊನಾ ಸೋಂಕಿನಿಂದ ಪರದಾಡುತ್ತಿದ್ದಾರೆ. ಯಾವುದೇ ಆಸ್ಪತ್ರೆಗಳಿಗೆ ಕೇಳಿದರೂ ಬೆಡ್ ಇಲ್ಲ ಎಂದು ಹೇಳುತ್ತಿದ್ದಾರೆ ಏನು ಮಾಡಬೇಕೆಂದೇ ತೋಚುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕಿ ಕುಸುಮಾ ಶಿವಳ್ಳಿ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ನನ್ನ ತಾಯಿ ಕೊರೊನಾ ಸೋಂಕಿನಿಂದ ಗಂಭೀರವಾಗಿದ್ದಾರೆ. ಆದರೆ ಆಸ್ಪತ್ರೆಗಳಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೋದರೆ ಅಲ್ಲಿ ದಾಖಲಿಸಿಕೊಳ್ಳುತ್ತಿಲ್ಲ. ನನಗೆ ತುಂಬಾ ಆತಂಕವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಕೋವಿಡ್ ರೋಗಿಗಳ ಚಿಕಿತ್ಸೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ
ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಸಕಿಗೆ ಧೈರ್ಯ ತುಂಬಿದ್ದು, ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಾವು ಸೂಚಿಸುತ್ತೆವೆ ಎಂದು ಹೇಳಿದ್ದಾರೆ. ಅಲ್ಲದೇ ತಕ್ಷಣ ಕಿಮ್ಸ್ ನಿರ್ದೇಶಕರಿಗೆ ಕರೆ ಮಾಡಿ ಆಸ್ಪತ್ರೆಯಲ್ಲಿ ಯಾವುದೇ ರೋಗಿಗೂ ಬೆಡ್ ಇಲ್ಲ ಎಂದು ಕಳಿಸುವಂತಿಲ್ಲ. ಸೋಂಕಿತರನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಿ ಎಂದು ತಾಕೀತು ಮಾಡಿದ್ದಾರೆ.