ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೊರೊನಾದಿಂದ ಗುಣಮುಖರಾಗಿ ಬರುವವರು ಸಾಕಷ್ಟು ಗೊಂದಲದಲ್ಲಿರುತ್ತಾರೆ. ಮುಂದೇನು ಮಾಡಬೇಕೆಂಬ ಚಿಂತೆ ಹಾಗೂ ಮುಂದೆ ಮತ್ತೆ ಕೊರೊನಾ ಕಾಡಿದ್ರೆ ಎಂಬ ಭಯ ಅವ್ರಲ್ಲಿರುತ್ತದೆ. ಕೊರೊನಾದಿಂದ ಚೇತರಿಸಿಕೊಂಡವರು ಅವರ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಕೊರೊನಾ ವೈರಸ್‌ನಿಂದ ಚೇತರಿಸಿಕೊಳ್ಳುವವರ ದೇಹವು ತುಂಬಾ ದುರ್ಬಲಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ವ್ಯಾಯಾಮ ಮಾಡಲು ಸಾಕಷ್ಟು ತೊಂದರೆಯಾಗುತ್ತದೆ. ಆದರೆ ನಿಧಾನವಾಗಿ ವ್ಯಾಯಾಮ ಮಾಡಲು ಶುರು ಮಾಡಬೇಕು. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತೀರಿ.
ಆಹಾರದಲ್ಲಿ ಸಾಧ್ಯವಾದಷ್ಟು ಪೌಷ್ಟಿಕಾಂಶವನ್ನು ಸೇರಿಸಿ. ಇದು ನಿಮ್ಮ ಆರೋಗ್ಯವನ್ನು ವೇಗವಾಗಿ ಸುಧಾರಿಸುತ್ತದೆ. ಕೊರೊನಾ ವೈರಸ್‌ನಿಂದಾಗಿ, ಹೆಚ್ಚಿನ ಜನರು ಬಾಯಿ ರುಚಿ ಕಳೆದುಕೊಳ್ಳುತ್ತಾರೆ. ಇದರಿಂದಾಗಿ ತೂಕವು ತುಂಬಾ ಕಡಿಮೆಯಾಗುತ್ತದೆ. ದೇಹ ಮತ್ತಷ್ಟು ದುರ್ಬಲಗೊಳ್ಳುತ್ತದೆ. ಆಹಾರದಲ್ಲಿ ಸಾವಯವ ಉತ್ಪನ್ನಗಳು, ಹಸಿರು ತರಕಾರಿಗಳು ಮತ್ತು ಮೊಟ್ಟೆಗಳನ್ನು ಸೇರಿಸಿ. ಅತಿಯಾಗಿ ತಿನ್ನಬೇಡಿ.
ಕೊರೊನಾ ವೈರಸ್ ಮೆಮೊರಿ ಕೋಶಗಳನ್ನು ಸಹ ಹಾನಿಗೊಳಿಸುತ್ತದೆ. ಸ್ಮರಣೆಯನ್ನು ಹೆಚ್ಚಿಸಲು, ಒಗಟುಗಳು ಅಥವಾ ಮೆದುಳನ್ನು ಹೆಚ್ಚು ಬಳಸುವ ಯಾವುದೇ ಆಟವನ್ನು ಆಡಿ. ಸುಲಭ ಆಟದೊಂದಿಗೆ ಪ್ರಾರಂಭಿಸಿ ಮತ್ತು ಕ್ರಮೇಣ ಅದರ ಮಟ್ಟವನ್ನು ಹೆಚ್ಚಿಸಿ.
ಕೊರೊನಾ ವೈರಸ್ ವರದಿಯು ನಕಾರಾತ್ಮಕವಾದ ನಂತರ ಸಾಮಾನ್ಯ ಜೀವನದತ್ತ ಸಾಗಲು ಆತುರಪಡಬೇಡಿ. ಸ್ವಲ್ಪ ಸಮಯ ನೀಡಿ ಮತ್ತು ನಿಧಾನವಾಗಿ ನಿಮ್ಮ ಹಳೆಯ ದಿನಚರಿಗೆ ಮರಳಲು ಪ್ರಯತ್ನಿಸಿ.
ಕೊರೊನಾದಿಂದ ಚೇತರಿಸಿಕೊಂಡ ನಂತ್ರವೂ ತಲೆನೋವು ಅಥವಾ ಆಯಾಸ ಕಾಣಿಸಿಕೊಂಡ್ರೆ ನಿರ್ಲಕ್ಷ್ಯ ಬೇಡ. ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ಈ ರೋಗಲಕ್ಷಣಗಳನ್ನು ಅವರಿಗೆ ತಿಳಿಸಿ.