ಕೊರೊನಾ ಕರಿಛಾಯೆ ದೇಶದ ಮೇಲೆ ಯಾವಾಗ ಬಿತ್ತೋ ಅಲ್ಲಿಂದ ಇಲ್ಲಿಯವರೆಗೂ ದೇಶದ ಪರಿಸ್ಥಿತಿ ಅಯೋಮಯವಾಗಿದೆ. ಎಲ್ಲಾ ಉದ್ಯಮಗಳ ಮೇಲೂ ಕೊರೊನಾ ತಾಂಡವವಾಡುತ್ತಿದೆ. ಹಾಲು ಉದ್ಯಮಕ್ಕೂ ಕೊರೊನಾ ಎಫೆಕ್ಟ್ ಹೆಚ್ಚಿನದಾಗಿ ತಟ್ಟಿದೆ. ಕೊರೊನಾ ಭಯದಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಕೊಳ್ಳೋದಿಕ್ಕೆ ಜನ ಮುಂದೆ ಬರುತ್ತಿಲ್ಲ.
ಹೌದು, ಕೊರೊನಾ ಸಮಯದಲ್ಲಿ ಕೆಎಂಎಫ್‌ಗೆ ಪ್ರತಿ ದಿನ 80 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆದರೆ ಇದರಲ್ಲಿ ಮಾರಾಟವಾಗುತ್ತಿರುವುದು ಮಾತ್ರ 45 ಲಕ್ಷ ಲೀಟರ್. ಉಳಿದ ಹಾಲನ್ನು ಹಾಲಿನ ಉತ್ಪನ್ನಗಳಾಗಿ ಮಾಡಲಾಗುತ್ತಿದೆ. ಆದರೆ ಆ ಉತ್ಪನ್ನಗಳು ಕೂಡ ಮಾರಾಟವಾಗುತ್ತಿಲ್ಲ. ಅಂದರೆ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹೀಗೆ ಹಾಲಿನ ಉತ್ಪನ್ನಗಳನ್ನು ಜನ ಕೊಳ್ಳಲು ಭಯಭೀತರಾಗಿದ್ದಾರೆ.
ಇನ್ನು ಕೊರೊನಾದಿಂದಾಗಿ ಮದುವೆಗಳಿಗೆ ಸಮಾರಂಭಗಳಿಗೆ ಹೊಡೆತ ಬಿದ್ದಿದೆ. ಮದುವೆ ಅಥವಾ ಸಮಾರಂಭಗಳನ್ನು ಮಾಡಿದರೂ ಇಂತಿಷ್ಟೆ ಜನ ಸೇರಬೇಕೆಂಬ ನಿಯಮ ಇದೆ. ಹೀಗಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇತ್ತ ತಿರುಪತಿ, ಶಬರಿ ಮಲೆ ದೇವಸ್ಥಾನಗಳು ಬಂದ್ ಆಗಿದ್ದರಿಂದಲೂ ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ. ಈ ಹೊಡೆತ ಹೈನುಗಾರಿಕೆ ಮೇಲೆಯೂ ಬಿದ್ದಿದೆ. ಹಾಲಿನ ದರ ಕಡಿಮೆಯಾಗುತ್ತಿರೋದ್ರಿಂದ ಹೈನುಗಾರಿಕೆ ಮಾಡುವವರು ಚಿಂತೆ ಮಾಡುವಂತಾಗಿದೆ.