alex Certify 2 ದಶಕದ ಬಳಿಕ ಚಿಕ್ಕಮಗಳೂರು ಜಿಲ್ಲೆಯನ್ನು ‘ಕೈ’ ವಶ ಮಾಡಿಕೊಂಡ ಕಾಂಗ್ರೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ದಶಕದ ಬಳಿಕ ಚಿಕ್ಕಮಗಳೂರು ಜಿಲ್ಲೆಯನ್ನು ‘ಕೈ’ ವಶ ಮಾಡಿಕೊಂಡ ಕಾಂಗ್ರೆಸ್

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿದ್ದು ಹಲವು ದಶಕಗಳ ಬಳಿಕ ತನ್ನ ಕ್ಷೇತ್ರಗಳನ್ನು ಮರಳಿ ಪಡೆದಿದೆ. ಸುಮಾರು ಎರಡು ದಶಕಗಳ ನಂತರ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿ ಹಳೆಯ ವೈಭವವನ್ನು ಮರಳಿ ಪಡೆದಿದೆ.

2018 ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯು ಚಿಕ್ಕಮಗಳೂರಿನಿಂದ ಸಿ ಟಿ ರವಿ, ಮೂಡಿಗೆರೆಯಿಂದ ಎಂ ಪಿ ಕುಮಾರಸ್ವಾಮಿ, ಕಡೂರಿನಿಂದ ಬೆಳ್ಳಿ ಪ್ರಕಾಶ್ ಮತ್ತು ತರೀಕೆರೆಯಿಂದ ಡಿ ಎಸ್ ಸುರೇಶ್ ಸೇರಿ ನಾಲ್ಕು ಶಾಸಕರನ್ನು ಹೊಂದಿತ್ತು. 1989 ರಿಂದ 1999 ರವರೆಗೆ ಕಾಂಗ್ರೆಸ್ಸಿನ ಸಿ ಆರ್ ಸಗೀರ್ ಅಹ್ಮದ್ ಚಿಕ್ಕಮಗಳೂರಿನಿಂದ ಸತತವಾಗಿ ಗೆದ್ದು ಎರಡು ಬಾರಿ ಸಚಿವರಾಗಿದ್ದರು. 1999 ರಲ್ಲಿ ಸಿ ಆರ್ ಸಗೀರ್ ಅಹ್ಮದ್, ಡಿ ಬಿ ಚಂದ್ರೇಗೌಡ ಮತ್ತು ಮೋಟಮ್ಮ ಅವರು ಎಸ್ ಎಂ ಕೃಷ್ಣ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ 1979ರಲ್ಲಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದ ನಂತರ ಈ ಜಿಲ್ಲೆ ಕಾಂಗ್ರೆಸ್‌ನ ಪ್ರಬಲ ಭದ್ರಕೋಟೆಯಾಗಿ ಮಾರ್ಪಟ್ಟು ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿತ್ತು. 2004ರಿಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದ ಜಿಲ್ಲೆಯಲ್ಲಿ ಬಿಜೆಪಿ ಹಿಡಿತ ಸಾಧಿಸಿದ್ದು, ದತ್ತಪೀಠ ವಿಮೋಚನಾ ಆಂದೋಲನ, ದತ್ತಮಾಲಾ ಅಭಿಯಾನ, ಶೋಭಾ ಯಾತ್ರೆ, ಧರ್ಮ ಸಂಸದ್ ಚಿಕ್ಕಮಗಳೂರು, ಮೂಡಿಗೆರೆ, ಕಾರ್ಕಳದಲ್ಲಿ ಬಿಜೆಪಿ ಮತಗಳನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಯಿತು.

ಆದರೆ 2023ರ ವಿಧಾನಸಭಾ ಚುನಾವಣೆ ಬಿಜೆಪಿಗೆ ನೀರಸವಾಗಿ ಪರಿಣಮಿಸಿದೆ. ಬಿಜೆಪಿ ಅಭ್ಯರ್ಥಿಗಳು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಸೋಲುಂಡಿದ್ದಾರೆ. ಬಿಜೆಪಿಯ ಹಿಂದುತ್ವದ ಪ್ರತಿಪಾದಕರಾದ ಸಿ ಟಿ ರವಿ ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿಯ ಹಾಲಿ ಶಾಸಕರಾಗಿದ್ದ ಸಿ ಟಿ ರವಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ನ ಎಚ್ ಡಿ ತಮ್ಮಯ್ಯ ವಿರುದ್ಧ ಸೋತಿದ್ದಾರೆ. ಕಡೂರಿನಲ್ಲಿ ಬೆಳ್ಳಿ ಪ್ರಕಾಶ್ ವಿರುದ್ಧ ಕಾಂಗ್ರೆಸ್ ನ , ಕೆ ಎಸ್ ಆನಂದ್ ಗೆಲುವು ಕಂಡಿದ್ದಾರೆ. ಮೂಡಿಗೆರೆಯಲ್ಲಿ ದೀಪಕ್ ದೊಡ್ಡಯ್ಯರನ್ನ ಕಾಂಗ್ರೆಸ್ ನ ಮೋಟಮ್ಮ ಅವರ ಪುತ್ರಿ ನಯನಾ ಸೋಲಿಸಿದ್ದಾರೆ. ಶೃಂಗೇರಿಯಲ್ಲಿ ರಾಜೇಗೌಡ ಅವರು ಡಿ ಎನ್ ಜೀವರಾಜ್ ಅವರನ್ನು 153 ಮತಗಳಿಂದ ಸೋಲಿಸಿದ್ದಾರೆ. ತರೀಕೆರೆಯಲ್ಲಿ ಡಿ ಎಸ್ ಸುರೇಶ್ ಅವರು ಜಿ ಎಚ್ ಶ್ರೀನಿವಾಸ್ ವಿರುದ್ಧ ಸೋಲು ಕಂಡಿದ್ದಾರೆ.

ಬಿಜೆಪಿಯ ಕೊಡಗು ಕೋಟೆಯನ್ನು ಛಿದ್ರಗೊಳಿಸಿದ ಕಾಂಗ್ರೆಸ್

ಚಿಕ್ಕಮಗಳೂರಷ್ಟೇ ಅಲ್ಲದೇ ಕೊಡಗು ಜಿಲ್ಲೆಯಲ್ಲಿ ಬಿಜೆಪಿಯ ಎರಡು ದಶಕಗಳ ಹಿಡಿತವನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಒಂದು ಕಾಲದಲ್ಲಿ ಬಿಜೆಪಿಯ ಕೋಟೆಯಾಗಿದ್ದ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.

ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ, ಬಿಜೆಪಿಯ ಅಪ್ಪಚ್ಚು ರಂಜನ್ ರನ್ನು ಸೋಲಿಸಿದ್ದಾರೆ. ವಿರಾಜಪೇಟೆಯಲ್ಲಿ ಕಾಂಗ್ರೆಸ್ ನ ಪೊನ್ನಣ್ಣ ಕಮಲ ಪಕ್ಷದ ಕೆ.ಜಿ. ಬೋಪಯ್ಯರನ್ನ ಮನೆಗೆ ಕಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...