ಪ್ರಧಾನಿ ಮೋದಿ ವಿರುದ್ಧ ಮಾಡಲಾಗಿದ್ದ ಟ್ವೀಟ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಅವಹೇಳನಕಾರಿ ಟ್ವೀಟ್ನ್ನು ಅಳಿಸಿ ಹಾಕಿದೆ. ಈ ಟ್ವೀಟ್ನಲ್ಲಿ ರಾಜ್ಯ ಕಾಂಗ್ರೆಸ್ ಪ್ರಧಾನಿ ಮೋದಿಯನ್ನು ಅನಕ್ಷರಸ್ಥ ಎಂಬಂತೆ ಬಿಂಬಿಸಿತ್ತು.
ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು. ಆದರೂ ಮೋದಿ ಓದಲಿಲ್ಲ. ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು. ಆದರೂ ಓದಲಿಲ್ಲ. ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಭಿಕ್ಷುರನ್ನಾಗಿ ಮಾಡುತ್ತಿದ್ದಾರೆ. ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ಪ್ರಧಾನಿ ಮೋದಿಯವರ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದ ಈ ಟ್ವೀಟ್ ಬಿಜೆಪಿ ಹಾಗೂ ಕಾಂಗ್ರೆಸ್ಸಿಗರ ನಡುವೆ ದೊಡ್ಡ ಮಾತಿನ ಯುದ್ಧವನ್ನೇ ನಡೆಸಿ ಬಿಟ್ಟಿದೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಕರ್ನಾಟಕ ವಕ್ತಾರೆ ಮಾಳವಿಕಾ ಅವಿನಾಶ್, ಇಷ್ಟು ಕೆಳಮಟ್ಟಕ್ಕೆ ಇಳಿಯಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಈ ಟ್ವೀಟ್ ಪ್ರತಿಕ್ರಿಯೆಗೂ ಅರ್ಹವಾಗಿಲ್ಲ ಎಂದು ಜರಿದಿದ್ದರು.
ಟ್ವೀಟ್ ಅಳಿಸಿದ ಬಳಿಕ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್, ಈ ರೀತಿಯ ಟ್ವೀಟ್ ಪೋಸ್ಟ್ ಆಗಿರುವುದು ದುರದೃಷ್ಟಕರ ಹಾಗೂ ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಈ ಸಂಬಂಧ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ಟ್ವೀಟ್ ಡಿಲೀಟ್ ಮಾಡಿದ ಬಳಿಕ ತಮ್ಮ ಅಧಿಕೃತ ಖಾತೆಯ ಮೂಲಕ ಟ್ವೀಟಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾನು ರಾಜಕಾರಣದಲ್ಲಿ ಎಂದಿಗೂ ನಾಗರಿಕ ಹಾಗೂ ಸಂಸದೀಯ ಭಾಷೆಗೆ ಮಹತ್ವ ನೀಡಿದ್ದೇನೆ. ಅನುಭವಿ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರು ಕರ್ನಾಟಕ ಕಾಂಗ್ರೆಸ್ನ ಅಧಿಕೃತ ಟ್ವಿಟರ್ ಮೂಲಕ ಈ ರೀತಿಯ ಟ್ವೀಟ್ ಮಾಡಿರುವುದು ದುರದೃಷ್ಟಕರ. ಈ ಟ್ವೀಟ್ನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಬರೆದಿದ್ದಾರೆ.