ದೇಶವಾಸಿಗಳ ಮನದಲ್ಲಿ ’ಕ್ಷಿಪಣಿ ಮಾನವ’ ಎಂದೇ ಸ್ಥಾನ ಪಡೆದಿರುವ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ದೇಶದ ವೈಜ್ಞಾನಿಕ ಸಮುದಾಯಕ್ಕೆ ಕೊಟ್ಟಿರುವ ಕೊಡುಗೆ ಬಹಳ ದೊಡ್ಡದು. ಕಲಾರಂ ಸ್ಮರಣಾರ್ಥ ದೇಶದ ಮೂಲೆ ಮೂಲೆಗಳಲ್ಲಿ ಅನೇಕ ಪ್ರತಿಮೆಗಳು ಇವೆ.
ಇದೀಗ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಕಲಾಂರ ವಿಶಿಷ್ಟ ಪ್ರತಿಮೆಯೊಂದನ್ನು ನಿರ್ಮಿಸಲಾಗಿದ್ದು, ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಉಪಯೋಗಕ್ಕೆ ಬಾರದ ನಟ್, ಬೋಲ್ಟ್, ವೈರ್ ತುಂಡುಗಳಂಥ ತ್ಯಾಜ್ಯಗಳನ್ನು ಬಳಸಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. 800 ಕೆಜಿ ತೂಕ ಇರುವ ಈ ಪ್ರತಿಮೆ 7.8 ಅಡಿ ಎತ್ತರವಿದೆ.
45 ವರ್ಷಗಳ ಬಳಿಕ ಕುಟುಂಬ ಕೂಡಿಕೊಂಡ ವೃದ್ಧ
“ಕ್ಷಿಪಣಿ ಮಾನವ ಅಬ್ದುಲ್ ಕಲಾಂ ಎಲ್ಲಾ ಇಂಜಿನಿಯರ್‌ಗಳಿಗೆ ಸ್ಪೂರ್ತಿಯಾಗಿದ್ದಾರೆ. ವಿಭಾಗ ಇಂಜಿನಿಯರ್‌ಗಳಾದ ಸಿಪಿ ಶ್ರೀಧರ್ ಹಾಗೂ ಶ್ರೀನಿವಾಸ್ ರಾಜು ನೇತೃತ್ವದಲ್ಲಿ ನಮ್ಮ ತಂಡವು ಈ ಕಲಾಕೃತಿಯನ್ನು ತ್ಯಾಜ್ಯ ವಸ್ತುಗಳಿಂದ ನಿರ್ಮಿಸಿದೆ. ಇದಕ್ಕೆ ಪೇಂಟಿಂಗ್‌ಗೆಂದು 3000 ರೂ.ಗಳನ್ನು ವ್ಯಯಿಸಿದ್ದೇವೆ” ಎಂದು ಯಶವಂತಪುರ ನಿಲ್ದಾಣದ ಕೋಚಿಂಗ್ ಡಿಪೋದ ಹಿರಿಯ ಅಧಿಕಾರಿ ವಿಕಾಸ್ ಗುರ್ವಾನಿ ತಿಳಿಸಿದ್ದಾರೆ.
ಯಶವಂತಪುರ ರೈಲ್ವೇ ಡಿಪೋ ಮುಂದಿರುವ ಈ ಪ್ರತಿಮೆಯ ಚಿತ್ರಗಳನ್ನು ರೈಲ್ವೇ ಸಚಿವಾಲಯ ಟ್ವೀಟ್ ಮಾಡಿದೆ.