17 ವರ್ಷದ ಬಾಲಕನನ್ನು ಆತನ ಶಿಕ್ಷಕಿಯ ಬಾಯ್ಫ್ರೆಂಡ್ ಕೊಲೆ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದೆ. ಈ ಘಟನೆಯು ಕಿಡ್ನಾಪ್ ಕೇಸ್ನಂತೆ ಕಾಣಬೇಕು ಎಂಬ ದುರುದ್ದೇಶದಿಂದ ಆರೋಪಿಯು ಮೃತ ಬಾಲಕನ ಮನೆಗೆ ಬೆದರಿಕೆ ಪತ್ರವನ್ನೂ ಕಳಿಸಿದ್ದ ಎನ್ನಲಾಗಿದೆ. ಆರೋಪಿ ಪ್ರಭಾತ್ ಶುಕ್ಲಾ ನಿವಾಸದಲ್ಲಿ 10ನೇ ತರಗತಿ ವಿದ್ಯಾರ್ಥಿಯ ಶವ ಪತ್ತೆಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಬಾಲಕನ ಟ್ಯೂಷನ್ ಶಿಕ್ಷಕಿ ರಚಿತಾ ಹಾಗೂ ಆಕೆಯ ಗೆಳೆಯ ಪ್ರಭಾತ್ ಶುಕ್ಲಾರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆಯಲ್ಲಿ ಆರ್ಯನ್ ಎಂಬಾತನ ಬಂಧನ ಕೂಡ ಆಗಿದೆ. ಆರೋಪಿಯು ತನ್ನ ಗರ್ಲ್ಫ್ರೆಂಡ್ ಜೊತೆಯಲ್ಲಿ ಮೃತ ಬಾಲಕ ದೈಹಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇಲೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಕೊಲೆಯಾದ ಬಾಲಕ ಕಾನ್ಪುರದ ಪ್ರಮುಖ ಬಟ್ಟೆ ಅಂಗಡಿ ಮಾಲೀಕನ ಪುತ್ರ ಎನ್ನಲಾಗಿದೆ. ಈತ ಟ್ಯುಷನ್ ಪಡೆಯಲು ಸ್ಕೂಟರ್ನಲ್ಲಿ ಮನೆಯಿಂದ ಹೊರಟವನು ಮನೆಗೆ ವಾಪಸ್ ಬಂದಿರಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸ್ಕೂಟರ್ನಲ್ಲಿ ಬಂದ ವ್ಯಕ್ತಿಯೊಬ್ಬ ನಿಮ್ಮ ಮಗ ಸುರಕ್ಷಿತವಾಗಿ ನಿಮಗೆ ಸಿಗಬೇಕು ಅಂದ್ರೆ 30 ಲಕ್ಷ ರೂಪಾಯಿ ನೀಡಬೇಕು ಎಂಬ ಪತ್ರವನ್ನು ನೀಡಿದ್ದ. ಅಲ್ಲದೇ ಈ ಪ್ರಕರಣದ ದಾರಿಯನ್ನು ತಪ್ಪಿಸಲು ಆ ಪತ್ರದ ಮೇಲೆ ʼಅಲ್ಲಾ ಹು ಅಕ್ಬರ್ʼ ಹಾಗೂ ಅಲ್ಲಾನ ಮೇಲೆ ವಿಶ್ವಾಸ ಇಡಿ ಎಂದೂ ಸಹ ಬರೆಯಲಾಗಿತ್ತು.
ಸಿಸಿಟಿವಿ ಫೂಟೇಜ್ ಪರಿಶೀಲನೆ ಮಾಡಿದ ಬಳಿಕ ಬಾಲಕ ಶುಕ್ಲಾನೊಂದಿಗೆ ಸ್ಟೋರ್ ರೂಮ್ ಒಳಗೆ ಹೋಗುತ್ತಿರೋದನ್ನು ಕಾಣಬಹುದಾಗಿದೆ. ಶಿಕ್ಷಕಿಯೇ ನಿನ್ನನ್ನು ಒಳಗೆ ಕರೆಯುತ್ತಿದ್ದಾಳೆ ಎಂದು ನಂಬಿಸಿ ಬಾಲಕನನ್ನು ಒಳಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಶುಕ್ಲಾ ಹಾಗೂ ಕೊಲೆಯಾದ ಬಾಲಕ ಇಬ್ಬರೂ ಒಟ್ಟಿಗೆ ಸ್ಟೋರ್ ರೂಮ್ ಒಳಗೆ ಪ್ರವೇಶಿಸಿದ್ದರು. ಆದರೆ ಶುಕ್ಲಾ ಮಾತ್ರ ಕೋಣೆಯಿಂದ ಹೊರಬಂದಿದ್ದಾನೆ. ಆದರೆ ಬಾಲಕ ಹೊರಬಂದಿರಲಿಲ್ಲ. ಇದಾದ ಬಳಿಕ ಆರೋಪಿ ಶುಕ್ಲಾ ಬಟ್ಟೆ ಬದಲಾಯಿಸಿ ಸ್ಕೂಟರ್ನಲ್ಲಿ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಶಿಕ್ಷಕಿ ರಚಿತಾ ಕೂಡ ಆರೋಪದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾಳೆ ಕೂಡ ಎನ್ನಲಾಗಿದೆ. ಇನ್ನು ಬೆದರಿಕೆ ಪತ್ರದಲ್ಲಿರುವ ಕೈ ಬರಹವು ತನ್ನ ಗೆಳೆಯ ಪ್ರಭಾತ್ ಶುಕ್ಲಾನದ್ದು ಎಂದು ರಚಿತಾ ಒಪ್ಪಿಕೊಂಡಿದ್ದಾಳೆ.