ಸಿಖ್ಖರ ವಿರುದ್ಧ ಹೇಳಿಕೆ ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ಗೆ ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿ ಸಮನ್ಸ್ ನೀಡಿದೆ. ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ನೇತೃತ್ವದ ಸಮಿತಿಯ ಎದುರು ಡಿಸೆಂಬರ್ 6ರ ಒಳಗಾಗಿ ಹಾಜರಾಗುವಂತೆ ಕಂಗನಾ ರನೌತ್ಗೆ ಸೂಚನೆ ನೀಡಲಾಗಿದೆ.
ನವೆಂಬರ್ 20ರಂದು ನಿಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ನೀವೇ ಪೋಸ್ಟ್ ಮಾಡಿರುವ ವಿಚಾರಗಳು ಆಕ್ಷೇಪಾರ್ಹವಾಗಿದೆ ಎಂದು ಅನೇಕ ದೂರುಗಳನ್ನು ಸಮಿತಿಯು ಸ್ವೀಕರಿಸಿದೆ ಎಂದು ಸಮಿತಿಯ ಉಪಕಾರ್ಯದರ್ಶಿಯು ಕಂಗನಾ ರಣೌತ್ಗೆ ನೋಟಿಸ್ ನೀಡಿದ್ದಾರೆ.
ಸಿಖ್ಖರನ್ನು ಖಲಿಸ್ತಾನಿ ಭಯೋತ್ಪಾದಕರು ಎಂದು ಬಣ್ಣಿಸುವ ಮೂಲಕ ಇಡೀ ಸಿಖ್ ಸಮುದಾಯಕ್ಕೆ ಅವಮಾನವನ್ನು ಉಂಟು ಮಾಡಿದ್ದೀರಿ ಎಂದು ಸಮನ್ಸ್ನಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಕ್ಕಾಗಿ ಮುಂಬೈನಲ್ಲಿ ಸಿಖ್ಖರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಸಂಬಂಧ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮುಂಬೈನ ಉದ್ಯಮಿ, ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ನಾಯಕ ಹಾಗೂ ಶಿರೋಮಣಿ ಅಕಾಲಿದಳವು ಕಂಗನಾ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉದ್ದೇಶಪೂರ್ವಕವಾಗಿ ಕೃಷಿ ಕಾನೂನುಗಳ ವಿರುದ್ಧ ರೈತರು ವರ್ಷವಿಡೀ ನಡೆಸಿದ ಪ್ರತಿಭಟನೆಯನ್ನು ಖಲಿಸ್ತಾನಿ ಚಳವಳಿ ಎಂದು ವ್ಯಾಖ್ಯಾನಿಸಿದ್ದಾರೆ ಎಂದು ಕಂಗನಾ ವಿರುದ್ಧ ದೂರಿದ್ದಾರೆ.