ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನನ್ನು ತಾನು ದೇಶದ ಶಕ್ತಿಶಾಲಿ ಮಹಿಳೆ ಎಂದು ಕರೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಂಗನಾ ರಣಾವತ್ರ ಭವಿಷ್ಯದ ಪೋಸ್ಟ್ಗಳ ಮೇಲೆ ಸೆನ್ಸಾರ್ ಹೇರಿಕೆ ಮಾಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಕಂಗನಾ ಈ ಹೇಳಿಕೆ ನೀಡಿದ್ದಾರೆ. ಖಲಿಸ್ತಾನಿ ಭಯೋತ್ಪಾದಕರು ಎಂದು ಹೇಳುವ ಮೂಲಕ ಕಂಗನಾ ಸದ್ಯ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕಂಗನಾರ ಈ ಹೇಳಿಕೆಯನ್ನು ಸಿಖ್ ಸಮುದಾಯ ತೀವ್ರವಾಗಿ ಖಂಡಿಸಿದೆ.
ದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಕಂಗನಾರ ಭವಿಷ್ಯದ ಸಾಮಾಜಿಕ ಮಾಧ್ಯಮಗಳ ಪೋಸ್ಟ್ಗಳ ಮೇಲೆ ಸೆನ್ಸಾರ್ಶಿಪ್ ಹೇರುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ ಸಂಬಂಧದ ಸುದ್ದಿ ವರದಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ ‘ಹಾಹಾ..! ನಾನು ಈ ದೇಶದ ಅತ್ಯಂತ ಶಕ್ತಿ ಶಾಲಿ ಮಹಿಳೆ’..! ಎಂದು ಬರೆದುಕೊಂಡಿದ್ದಾರೆ.
ವಕೀಲ ಚರಂಜೀತ್ ಸಿಂಗ್ ಚಂದ್ರಪಾಲ್, ಕಂಗನಾ ರಣಾವತ್ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ಮುಂಬೈನ ಖಾರ್ ಪೊಲೀಸ್ ಠಾಣೆಗೆ ವರ್ಗಾಯಿಸುವಂತೆ ಕೋರಿದ್ದಾರೆ. ಅಲ್ಲದೇ ಆರು ತಿಂಗಳೊಳಗಾಗಿ ದೋಷಾರೋಪ ಪಟ್ಟಿ ಹಾಗೂ 2 ವರ್ಷದೊಳಗಾಗಿ ತ್ವರಿತ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.