ಕೋಲ್ಕತಾ: ಸೋಷಿಯಲ್ ಮೀಡಿಯಾಗೆ ಯಾವುದೋ ಮೂಲೆಯಲ್ಲಿ ಇರುವ ವ್ಯಕ್ತಿಯನ್ನು ಸೆಲೆಬ್ರಿಟಿ ಮಾಡುವ ಇಲ್ಲವೇ ಯಾವುದೋ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸುವ ಶಕ್ತಿ ಇದೆ. ಇತ್ತೀಚೆಗೆ ಭಾರಿ ಟ್ರೆಂಡ್ ಆಗಿದ್ದ ಬದಾಮ್ ಬದಾಮ್ ಕಚ್ಚಾ ಬದಾಮ್ ಹಾಡು ಇದಕ್ಕೊಂದು ಉದಾಹರಣೆ. ಪಶ್ಚಿಮ ಬಂಗಾಳದ ಬಿರ್ಭೂಮ್‌ನ ಭುವನ್ ಬಡ್ಯಾಕರ್ ಹಾಡಿದ್ದ ಈ ಹಾಡು ಇಡೀ ವಿಶ್ವಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿಸಿತ್ತು. ಈ ಹಾಡಿಗೆ ಕುಣಿದವರೇ ಇಲ್ಲವೇನೋ ಎನ್ನುವಷ್ಟರಮಟ್ಟಿಗೆ ಇದು ವೈರಲ್ ಆಗಿತ್ತು.
ದೇಶ-ವಿದೇಶಗಳ ಸೆಲೆಬ್ರಿಟಿಗಳು ಕೂಡ ರೀಲ್ ವಿಡಿಯೋಗಳನ್ನು ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ. ಬದ್ಯಾಕರ್ ಅವರು ಕಡಲೆಕಾಯಿ (ಕಚ್ಚಾ ಬದಾಮ್) ಮಾರಾಟಕ್ಕಾಗಿ ಬಿರ್ಭುಮ್ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಪ್ರಯಾಣಿಸುತ್ತಿದ್ದಾಗ ಖರೀದಿದಾರರನ್ನು ಆಕರ್ಷಿಸಲು ಹಾಡನ್ನು ಸಂಯೋಜಿಸಿದ್ದರು. ಒಂದು ದಿನ, ಅವರು ಕಡಲೆಕಾಯಿಯನ್ನು ಮಾರುತ್ತಿದ್ದಾಗ, ಈ ಹಾಡನ್ನು ಗೊಣಗುತ್ತಿದ್ದರು. ಯಾರೋ ಒಬ್ಬರು ಹಾಡನ್ನು ಒಮ್ಮೆ ಕೇಳಿದ ನಂತರ ಅದನ್ನು ರೆಕಾರ್ಡ್ ಮಾಡಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲಿಂದ ಇದೊಂದು ರೀತಿಯಲ್ಲಿ ಹುಚ್ಚೆಬ್ಬಿಸಿಬಿಟ್ಟಿತ್ತು.
ಅದೇ ಗುಂಗಿನಲ್ಲಿರುವ ಭುವನ್ ಅವರು ಇನ್ನೊಂದು ಗೀತೆ ರಚಿಸಿದ್ದರು. ಆದರೆ ಅದ್ಯಾಕೋ ಅಷ್ಟು ಹಿಟ್ ಆಗಲಿಲ್ಲ. ಇದೀಗ ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧವಾಗಿರುವ ಕಾಳಿ ಪೂಜೆಯ ಸಂದರ್ಭದಲ್ಲಿ ಅವರು ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಅವರು ಇನ್ನು ಮುಂದೆ ಕಡಲೆಕಾಯಿ ಮಾರಾಟ ಮಾಡುವುದಿಲ್ಲ ಎಂದು ಅರ್ಥ ಬರುವ ಹಾಡು ಹಾಡಿದ್ದಾರೆ.
ಅವರ ಹೊಸ ಹಾಡು ‘ಏಖಾನ್ ಆಮಿ ಬೆಚ್ಚಿ ನಾ ಬದಮ್’. ಈ ಹಾಡಿನಲ್ಲಿ, ಅವರು ತಮ್ಮ ಜೀವನ ಹೇಗೆ ಬದಲಾಗಿದೆ ಎಂಬುದನ್ನು ಹೇಳಿದ್ದಾರೆ. ಈ ಹಾಡು ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಪ್ರತಿಕ್ರಿಯೆ ಪಡೆಯುತ್ತದೆ ಎಂಬುದನ್ನು ಈಗ ನೋಡಬೇಕಾಗಿದೆ.