alex Certify ಹೆಣ್ಣುಮಕ್ಕಳಿಗೆ ಉಚಿತವಾಗಿ ಮೈತ್ರಿ ಋತುಚಕ್ರದ ಕಪ್ ವಿತರಣೆ: ಸ್ಯಾನಿಟರಿ ಪ್ಯಾಡ್ ಬದಲು ಪರಿಸರ ಸ್ನೇಹಿ ಕಪ್ ಬಳಸಿ: ಸಚಿವ ಸುಧಾಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣುಮಕ್ಕಳಿಗೆ ಉಚಿತವಾಗಿ ಮೈತ್ರಿ ಋತುಚಕ್ರದ ಕಪ್ ವಿತರಣೆ: ಸ್ಯಾನಿಟರಿ ಪ್ಯಾಡ್ ಬದಲು ಪರಿಸರ ಸ್ನೇಹಿ ಕಪ್ ಬಳಸಿ: ಸಚಿವ ಸುಧಾಕರ್

ಚಾಮರಾಜನಗರ: ರಾಜ್ಯದ ಪ್ರತಿ ಹೆಣ್ಣುಮಕ್ಕಳಿಗೆ ಉಚಿತವಾಗಿ ಮೈತ್ರಿ ಮುಟ್ಟಿನ ಕಪ್‌ ಗಳನ್ನು ನೀಡುವ ಚಿಂತನೆ ಸರ್ಕಾರಕ್ಕಿದೆ. ಪ್ರಾಯೋಗಿಕ ಯೋಜನೆ ಪೂರ್ಣಗೊಂಡ ಬಳಿಕ ಈ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ, ʼಮೈತ್ರಿ ಮುಟ್ಟಿನ ಕಪ್‌- ಶುಚಿ ಯೋಜನೆಯʼ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಟ್ಟು ಎನ್ನುವುದು ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಸಹಜವಾಗಿ ಆಗುವ ಪ್ರಕ್ರಿಯೆ. ಶೇ.70 ರಷ್ಟು ಹೆಣ್ಣುಮಕ್ಕಳು ಹಾಗೂ ತಾಯಂದಿರು ಇದನ್ನು ಹೇಳಿಕೊಳ್ಳಲು ಈಗಲೂ ಮುಜುಗರಪಡುತ್ತಾರೆ. ಇದು ಒಂದು ರೀತಿ ಸಾಮಾಜಿಕ ಪಿಡುಗಾಗಿದೆ. ಹದಿಹರಯದ ಹೆಣ್ಣುಮಕ್ಕಳು ಈ ವಿಚಾರದಲ್ಲಿ ಆತಂಕಕ್ಕೊಳಗಾಗಬಾರದು, ನಾಚಿಕೆ ಪಟ್ಟುಕೊಳ್ಳಬಾರದು. ಮುಟ್ಟಿನ ಬಗ್ಗೆ ಧೈರ್ಯವಾಗಿ ಮನೆಯವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದರು.

ಇಂದಿನ ಆಧುನಿಕ ಸ್ಯಾನಿಟರಿ ಪ್ಯಾಡ್‌ ಗಳಲ್ಲಿ ಪ್ಲಾಸ್ಟಿಕ್‌ ಇರುವುದರಿಂದ, ಅದು ಮಣ್ಣಿನಲ್ಲಿ ಕರಗಲು 600-800 ವರ್ಷಗಳು ಬೇಕಾಗುತ್ತವೆ. ಆದರೆ ಈ ಮುಟ್ಟಿನ ಕಪ್‌ ಗಳು ಪರಿಸರ ಸ್ನೇಹಿಯಾಗಿವೆ. ಒಂದು ಕಪ್‌ ಅನ್ನು 6 ರಿಂದ 10 ವರ್ಷಗಳ ಕಾಲ ಬಳಸಬಹುದು. ಇದರಿಂದ ಹಣವೂ ಉಳಿತಾಯವಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ಹೆಣ್ಣುಮಕ್ಕಳಿಗೆ ಇದನ್ನು ಉಚಿತವಾಗಿ ನೀಡಲು ಚಿಂತಿಸಿದೆ. ಸದ್ಯಕ್ಕೆ ಇದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.

ಋತುಚಕ್ರದ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಹಿಂದೆ ಹೆಣ್ಣುಮಕ್ಕಳು ಮುಟ್ಟಿನ ವೇಳೆ ಬಟ್ಟೆ ಬಳಸುತ್ತಿದ್ದು, ಅದು ಸುರಕ್ಷಿತವಾಗಿರಲಿಲ್ಲ. ಅದು ಅನೇಕ ರೋಗಗಳು ಬರಲು ಕಾರಣವಾಗುತ್ತಿತ್ತು. ಹೆಣ್ಣುಮಕ್ಕಳು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ ಬಳಸುತ್ತಾರೆ. ಆದರೆ, ಸ್ಯಾನಿಟರಿ ಪ್ಯಾಡ್‌ ನಿಂದ ಕಸದ ಸಮಸ್ಯೆ ಹೆಚ್ಚಾಗಿದೆ ಹಾಗೂ ಇದು ಪರಿಸರಕ್ಕೆ ಹಾನಿಯಾಗುತ್ತದೆ. ಅಲ್ಲದೆ, ಹೆಣ್ಣುಮಕ್ಕಳು ಅನೇಕ ಬಾರಿ ಪ್ಯಾಡ್‌ ಬದಲಿಸಬೇಕಾಗುತ್ತದೆ. ಸರ್ಕಾರ ನೀಡುತ್ತಿರುವ ಮುಟ್ಟಿನ ಕಪ್‌ ಗಳು ಈ ಸಮಸ್ಯೆಗಳನ್ನು ನಿವಾರಿಸಲಿದೆ ಎಂದರು.

ನರ್ಸ್‌ ನೇಮಕಾತಿ

ಆದಿವಾಸಿ ಸೋಲಿಗ ಸಮುದಾಯದವರಲ್ಲಿ ನರ್ಸಿಂಗ್‌ ವ್ಯಾಸಂಗ ಮಾಡಿದವರಿಗೆ, ವಿಶೇಷ ನೇಮಕಾತಿ ಅಥವಾ ಮೀಸಲಾತಿ ಮೂಲಕ ನರ್ಸ್‌ ಗಳನ್ನಾಗಿ ನೇಮಿಸಲು ಕ್ರಮ ವಹಿಸಲಾಗುವುದು. ಹಾಗೆಯೇ ಆಶಾ ಕಾರ್ಯರ್ತೆಯರನ್ನು ನೇಮಕ ಮಾಡುವಾಗಲೂ ಈ ಸಮುದಾಯವನ್ನು ವಿಶೇಷವಾಗಿ ಪರಿಗಣಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಹೊಸ ಆಸ್ಪತ್ರೆ

ಯಳಂದೂರು ತಾಲೂಕಿಗೆ ಹೊಸ ಆಸ್ಪತ್ರೆಯನ್ನು ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಜಿಲ್ಲೆಯ ಎರಡು ಕ್ಷೇತ್ರಗಳ ಆಸ್ಪತ್ರೆಗಳಿಗೆ ಡಯಾಲಿಲಿಸ್‌ ಯಂತ್ರಗಳನ್ನು ಕೂಡ ನೀಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...