alex Certify ಸಹಾಯ ಕೇಳಿದ ಮಹಿಳೆಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿದ ಕಾಂಗ್ರೆಸ್ ಶಾಸಕ ರಂಗನಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಾಯ ಕೇಳಿದ ಮಹಿಳೆಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿದ ಕಾಂಗ್ರೆಸ್ ಶಾಸಕ ರಂಗನಾಥ್

ಬೆಂಗಳೂರು: ಸಹಾಯ ಕೇಳಿ ಬಂದ ಮಹಿಳೆಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿ ಕಾಂಗ್ರೆಸ್ ಶಾಸಕ ರಂಗನಾಥ್ ಮಾನವೀಯತೆ ತೋರಿದ್ದಾರೆ.

42ರ ವರ್ಷದ ಆಶಾ ಅವರು ಡಾ.ಹೆಚ್.ಡಿ. ರಂಗನಾಥ್ ಅವರನ್ನು ಸಂಪರ್ಕಿಸಿ ಮೊಣಕಾಲು ಶಸ್ತ್ರ ಚಿಕಿತ್ಸೆಗಾಗಿ ಅವರ ಬಳಿ ಆರ್ಥಿಕ ಸಹಾಯ ಕೋರಿದ್ದಾರೆ. ಎರಡು ಬಾರಿ ಕಾಂಗ್ರೆಸ್ ಶಾಸಕ ಮತ್ತು ಮೂಳೆ ಶಸ್ತ್ರಚಿಕಿತ್ಸಕರಾದ ರಂಗನಾಥ್, ಮಹಿಳೆಯ ಕಷ್ಟವನ್ನು ಕೇಳಿದ ನಂತರ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಿ ಸ್ವತಃ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಮೊಣಕಾಲು ಮತ್ತು ಸೊಂಟದ ಸಮಸ್ಯೆಯಿಂದ ಬಳಲುತ್ತಿರುವ ಮನೆಕೆಲಸದಾಕೆ ಆಶಾ ಅವರು ಇತ್ತೀಚೆಗೆ ತಮ್ಮ ಕ್ಷೇತ್ರವಾದ ಕುಣಿಗಲ್‌ನಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುತ್ತಿದ್ದ ರಂಗನಾಥ್ ಅವರನ್ನು ಸಂಪರ್ಕಿಸಿದರು.

ಆಶಾ ಹತ್ತು ವರ್ಷಗಳ ಹಿಂದೆ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಮತ್ತೆ ನೋವಿನಿಂದ ಬಳಲುತ್ತಿದ್ದಾರೆ. ಆಕೆ ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದು, ಇಂಪ್ಲಾಂಟ್‌ಗೆ 7 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. ನಂತರ ಅವರು ಸರ್ಕಾರಿ ಆಸ್ಪತ್ರೆಗೆ ಹೋದರೂ ಪ್ರಯೋಜನವಾಗಿಲ್ಲ.

ಮಹಿಳೆಗೆ ಹಣ ನೀಡುವ ಬದಲು ನಾನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿ ಅಲ್ಲಿನ ವೈದ್ಯರಿಗೆ ತಿಳಿಸಿದೆ. ಆಕೆಯ ಆರೋಗ್ಯದ ಬಗ್ಗೆ ಚರ್ಚಿಸಿ ಭಾನುವಾರ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಮಹಿಳೆ ಈಗ ಚೆನ್ನಾಗಿಯೇ ಇದ್ದಾರೆ. ವೆಚ್ಚ 1.87 ಲಕ್ಷ ರೂ.ವರೆಗೆ ಬಂದಿದ್ದು, ಅದನ್ನು ನಾನು ವ್ಯವಸ್ಥೆ ಮಾಡಿದ್ದೇನೆ ಎಂದು ರಂಗನಾಥ್ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿಯಾಗಿರುವ ರಂಗನಾಥ್ ಅವರು ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಆರ್ಥೋಪೆಡಿಕ್ಸ್‌ ನಲ್ಲಿ ಮಾಸ್ಟರ್ ಆಫ್ ಸರ್ಜರಿ(ಎಂಎಸ್) ಮುಗಿಸಿದ್ದಾರೆ.

ರಾಜಕೀಯದಲ್ಲಿದ್ದರೂ ಸಮಯ ಸಿಕ್ಕಾಗಲೆಲ್ಲ ನನ್ನ ವೃತ್ತಿಯನ್ನು ಅಭ್ಯಾಸ ಮಾಡುತ್ತೇನೆ. ಕೋವಿಡ್ ನಂತರ, ನಾನು ಕೆಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದೇನೆ. ಈಗ ಎರಡು ವರ್ಷಗಳ ನಂತರ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಮೊಣಕಾಲು ಮತ್ತು ಸೊಂಟದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಈ ಯೋಜನೆಯು ಮರು ಶಸ್ತ್ರಚಿಕಿತ್ಸೆಗೆ ಅವಕಾಶ ನೀಡುವುದಿಲ್ಲ ಮತ್ತು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ರಂಗನಾಥ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...