
ಜಾನ್ ಅಬ್ರಹಾಂ ಫಿಟ್ನೆಸ್ ಫ್ರೀಕ್ ಅನ್ನೋದು ಅವರ ಶರೀರವನ್ನು ನೋಡಿದ ತಕ್ಷಣವೇ ಯಾರು ಬೇಕಾದರೂ ಅಂದಾಜಿಸಬಹುದಾದ ವಿಚಾರ. ಆದರೆ ಅವರ ಸಾಮಾನ್ಯ ಜ್ಞಾನ ಎಷ್ಟಿದೆ ಅನ್ನೋದು ಟ್ವಿಟರ್ನಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋವೊಂದರ ಮೂಲಕ ಜನರಿಗೆ ತಿಳಿದಂತೆ ಕಾಣುತ್ತಿದೆ.
ಉತ್ತಮ ಆಹಾರ ಕ್ರಮ, ಕಸರತ್ತುಗಳು ಹಾಗೂ ದೇಹದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಜಾನ್ ಅಬ್ರಹಾಂಗೆ ತಿಳಿದಿದೆ ಎಂದು ನೀವೆಲ್ಲ ಎಂದುಕೊಂಡಿದ್ದೀರಾ. ಆದರೆ ಕಪಿಲ್ ಶರ್ಮಾರ ಕಾರ್ಯಕ್ರಮವೊಂದರಲ್ಲಿ ಜಯತೆ 2 ಸಿನಿಮಾ ಪ್ರಮೋಷನ್ಗಾಗಿ ಆಗಮಿಸಿದ್ದ ಜಾನ್ ಅಬ್ರಹಾಂ ಹೃದಯಾಘಾತದ ಬಗ್ಗೆ ವಿವರಿಸಿದ ಪರಿ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.
ಸಿನಿಮಾದ ನಟಿ ದಿವ್ಯಾ ಖೋಸ್ಲಾ ಕುಮಾರ್ ಜೊತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಜಾನ್ ಅಬ್ರಹಾಂ ಹೃದಯಾಘಾತದ ಬಗ್ಗೆ ವಿವರಿಸುತ್ತಾರೆ. ಇದರಲ್ಲಿ ಅವರು ಒತ್ತಡ ಹಾಗೂ ಕಳಪೆ ಆಹಾರ ಕ್ರಮದಿಂದ ಹೃದಯಾಘಾತ ಸಂಭವಿಸುತ್ತೆ ಎಂದು ಹೇಳಿದ್ರು. ಟ್ರೈಗ್ಲಿಸರೈಡ್ಗಳನ್ನು ಗುಳ್ಳೆಗಳಿಗೆ ಹೋಲಿಕೆ ಮಾಡಿದ್ದಾರೆ.
ಈ ವೈರಲ್ ವಿಡಿಯೋಗೆ ‘ ನಮ್ಮ ಮೆಡಿಕಲ್ ವಿದ್ಯಾರ್ಥಿಗಳಿಗೆ ಇಷ್ಟು ಆತ್ಮಸ್ಥೈರ್ಯ ಇರುತ್ತಿದ್ದರೆ ಎಷ್ಟು ಚೆನ್ನಾಗಿತ್ತು’ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 1.7 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ. ಜಾನ್ ಅಬ್ರಹಾಂ ವಿವರಣೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ವಿವರಣೆಯೇ ಹೃದಯಾಘಾತ ತರಿಸುವಂತಿದೆ ಎಂದು ವ್ಯಂಗ್ಯವಾಡ್ತಿದ್ದಾರೆ.