ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶುಕ್ರವಾರ ಲಾಸ್ ಏಂಜಲೀಸ್ನ ಮೇಯರ್ ಎರಿಕ್ ಗಾರ್ಸೆಟ್ಟಿಯನ್ನ ಭಾರತದ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ.
ಎರಿಕ್ ಗಾರ್ಸೆಟ್ಟಿ ರಾಯಭಾರಿಯಾಗಲು ಅಮೆರಿಕ ಸೆನೆಟ್ ಒಪ್ಪಿಗೆ ನೀಡಿದಲ್ಲಿ ಕೆನ್ನೆಥ್ ಜಸ್ಟರ್ರ ಸ್ಥಾನವನ್ನ ಗಾರ್ಸೆಟ್ಟು ಪಡೆದುಕೊಳ್ಳಲಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ಕೆನ್ನೆಥ್ ಜಸ್ಟರ್ ಭಾರತದ ಅಮೆರಿಕ ರಾಯಭಾರಿಯಾಗಿದ್ದರು.
ಎರಿಕ್ ಗಾರ್ಸೆಟ್ಟಿ 2013ರಿಂದ ಲಾಸ್ ಎಂಜಲೀಸ್ನ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರು ಬಾರಿ ಕೌನ್ಸಿಲ್ ಅಧ್ಯಕ್ಷರಾಗಿದ್ದು ಸೇರಿದಂತೆ ಸಿಟಿ ಕೌನ್ಸಿಲ್ ಸದಸ್ಯರಾಗಿ 12 ವರ್ಷ ಗಾರ್ಸೆಟ್ಟಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ.
ಮೇಯರ್ ಆಗಿ ಗಾರ್ಸೆಟ್ಟಿ ಜನದಟ್ಟಣೆಯುಳ್ಳ ವಿಮಾನ ನಿಲ್ದಾಣ ಹಾಗೂ ಜನನಿಬಿಡ ಸರಕು ಬಂದರಿನ ಮೇಲ್ವಿಚಾರಣೆ ಜವಾಬ್ದಾರಿಯನ್ನ ಹೊತ್ತಿದ್ದರು. ಇದು ಮಾತ್ರವಲ್ಲದೇ ಅಮೆರಿಕದಲ್ಲಿ ಬೇಸಿಗೆ ಒಲಿಂಪಿಕ್ ನಡೆಸುವ ಪದ್ಧತಿಯನ್ನ ವಾಪಸ್ ತರುವಲ್ಲಿ ಗಾರ್ಸೆಟ್ಟಿ ಪ್ರಮುಖ ಪಾತ್ರ ವಹಿಸಿದ್ದಾರೆ.