ರಾಜಸ್ಥಾನದ ಜೋಧಪುರದಲ್ಲಿ 19 ವರ್ಷದ ಮಾಡೆಲ್ ಹೋಟೆಲ್ ಟೆರೇಸ್ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆಯು ವರದಿಯಾಗಿದೆ.
ಶನಿವಾರ ರಾತ್ರಿಯ ವೇಳೆಗೆ ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗುನ್ಗುನ್ ಉಪಾಧ್ಯಾಯ ಎಂಬ ರೂಪದರ್ಶಿಯು ಶನಿವಾರದಂದು ಉದಯಪುರದಿಂದ ಜೋಧಪುರಕ್ಕೆ ಮರಳಿದ್ದರು ಎನ್ನಲಾಗಿದೆ.
ಜೋಧಪುರ ಹೋಟೆಲ್ ಲಾರ್ಡ್ಸ್ ಇನ್ನಲ್ಲಿ ಗುನ್ಗುನ್ ಉಪಾಧ್ಯಾಯ ಇದ್ದರು ಎನ್ನಲಾಗಿದೆ. ಈ ಕಠಿಣ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಗುನ್ಗುನ್ ತನ್ನ ತಂದೆಗೆ ಫೋನ್ ಮಾಡಿ ತನ್ನ ಮುಖವನ್ನು ನೋಡುವಂತೆ ಹೇಳಿದ್ದರು ಎನ್ನಲಾಗಿದೆ.
ಇದರಿಂದ ಆತಂಕಗೊಂಡ ತಂದೆಯು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರು. ಕೂಡಲೇ ಪೊಲೀಸರು ಜೋಧಪುರ ಹೋಟೆಲ್ಗೆ ತೆರಳಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಾಡೆಲ್ ಗುನ್ಗುನ್ ಹೋಟೆಲ್ನ ಆರನೇ ಮಹಡಿಯಿಂದ ಹಾರಿದ್ದರು.
ಗುನ್ಗುನ್ ಉಪಧ್ಯಾಯರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಸೂಕ್ತವಾದ ತನಿಖೆ ಮುಂದುವರಿಸಿದ್ದಾರೆ.