ಕೋವಿಡ್ ಕಾರಣಕ್ಕೆ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ 5 ನೇ ಟೆಸ್ಟ್ನಿಂದ ಹೊರಗುಳಿಯುವಂತಾಗಿದೆ. ಇದೇ ವೇಳೆ ಭಾರತ ತಂಡದ ನಾಯಕ ಯಾರಾಗಬೇಕೆಂಬ ಚರ್ಚೆ ನಡೆದಾಗ ಜಸ್ಪ್ರೀತ್ ಬುಮ್ರಾ ಹೆಸರು ಅಂತಿಮಗೊಂಡಿದೆ. ಪಂತ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮರು ನಿಗದಿಪಡಿಸಲಾದ ಐದನೇ ಟೆಸ್ಟ್ಗೆ ಬೂಮ್ರಾ ಅವರನ್ನು ಭಾರತ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಶುಕ್ರವಾರ ಪ್ರಕಟಿಸಿದೆ.
ಕೋವಿಡ್ ಪರೀಕ್ಷೆ ನಡೆಸಿದಾಗ ರೋಹಿತ್ ಇನ್ನೂ ಚೇತರಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಕಳೆದ ವಾರ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಭಾರತವನ್ನು ಮುನ್ನಡೆಸಿದ್ದರು. ಭಾರತದ ನಾಯಕ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿ 25 ರನ್ ಗಳಿಸಿದರು, ಆದರೆ 2 ನೇ ಇನ್ನಿಂಗ್ಸ್ನಲ್ಲಿ ಮೈದಾನಕ್ಕೆ ಇಳಿಯಲಿಲ್ಲ.
ಇನ್ನು ತಮ್ಮನ್ನು ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಬೂಮ್ರಾ ಖುಷಿಪಟ್ಟಿದ್ದಾರೆ. “ಇದು ಬಹಳ ದೊಡ್ಡ ಗೌರವ. ಇದು ಬಹಳ ದೊಡ್ಡ ಸಾಧನೆ’ ಎಂದು ಹೇಳಿದರು. “ನಾವು ಬೆಳಿಗ್ಗೆ ಪರೀಕ್ಷೆ ಮಾಡಿದ್ದು, ರೋಹಿತ್ಗೆ ಇನ್ನೂ ಪಾಸಿಟಿವ್ ಇರುವುದರಿಂದ ನಾನು ತಂಡವನ್ನು ಮುನ್ನಡೆಸಲಿದ್ದೇನೆ ಎಂದು ನನಗೆ ಅಧಿಕೃತವಾಗಿ ತಿಳಿಸಲಾಯಿತು’ ಎಂದರು.
1987ರಲ್ಲಿ ಕಪಿಲ್ ದೇವ್ ಭಾರತವನ್ನು ಟೆಸ್ಟ್ನಲ್ಲಿ ಮುನ್ನಡೆಸಿದ ನಂತರ ಬುಮ್ರಾ ಮೊದಲ ವೇಗಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಇವರನ್ನು ತಂಡದ ಉಪನಾಯಕನಾಗಿ ನೇಮಿಸಲಾಯಿತು.
2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪದಾರ್ಪಣೆ ಮಾಡಿದ ನಂತರ ಬುಮ್ರಾ ತಮ್ಮ ವೃತ್ತೀಜಿವನದಲ್ಲಿ ಇಲ್ಲಿಯವರೆಗೆ 29 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು 123 ವಿಕೆಟ್ ಪಡೆದಿದ್ದಾರೆ.