ಜಪಾನ್ನ ಜಿಮ್ನಾಸ್ಟ್ ಹಿತೋಮಿ ಹಟಕೇಡಾ ಎಂಬವರು ತರಬೇತಿ ಪಡೆಯುತ್ತಿದ್ದ ವೇಳೆ ಬಾರ್ಗಳಿಂದ ಆಯತಪ್ಪಿ ಬಿದ್ದ ಪರಿಣಾಮ ಅವರ ಬೆನ್ನುಮೂಳೆಗೆ ಗಂಭೀರ ಗಾಯ ಉಂಟಾಗಿದೆ ಎಂದು ಜಪಾನ್ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲೂ ಭಾಗವಹಿಸಿ ಗಮನ ಸೆಳೆದಿದ್ದ ಹಿತೋಮಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ವೈದ್ಯರು ಹಿತೋಮಿಯ ಬೆನ್ನು ಮೂಳೆಗೆ ಗಂಭೀರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ಹೇಳಿದ್ದಾರೆ.
21 ವರ್ಷದ ಹಿತೋಮಿ ಇಂದು ನಡೆಯಲಿರುವ ವರ್ಲ್ಡ್ ಚಾಂಪಿಯನ್ಶಿಪ್ ಆಲ್ ಅರೌಂಡ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಅರ್ಹತೆ ಪಡೆದಿದ್ದರು. ಆದರೆ ಇದೀಗ ಅನಿವಾರ್ಯವಾಗಿ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
ಹಿತೋಮಿಗೆ ಆಕೆಯ ತಾಯಿ ಯುಕಿಕೊ ತರಬೇತಿ ನೀಡುತ್ತಿದ್ದರು. ಹಿತೋಮಿ ತಂದೆ ಯೋಶೈಕಿ ಕೂಡ ಮಾಜಿ ಜಿಮ್ನಾಸ್ಟ್ ಆಗಿದ್ದು, 1992ರ ಜಪಾನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಸಂಪಾದಿಸಿದ್ದರು.