ಟೆಕ್ಸಾಸ್ನಲ್ಲಿರುವ ವಿವಾದಾತ್ಮಕ ಗರ್ಭಪಾತಿ ವಿರೋಧ ಕಾನೂನನ್ನು ವಿರೋಧಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್ರ ನಿಲುವನ್ನು ಪ್ರಶ್ನಿಸಿದ ಪುರುಷ ವರದಿಗಾರನಿಗೆ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜೆನ್ ಸಾಕಿಗೆ ಮಾಧ್ಯಮಗಳು ಗರ್ಭಪಾತ ವಿರೋಧಿ ಕಾನೂನಿನ ಬಗ್ಗೆಯೇ ಹೆಚ್ಚು ಪ್ರಶ್ನೆಗಳನ್ನು ಕೇಳಿರುವುದನ್ನು ಕಾಣಬಹುದಾಗಿದೆ. ಓವನ್ ಜೆನ್ಸೆನ್ ಎಂಬ ಹೆಸರಿನ ವರದಿಗಾರನೊಬ್ಬ ಕ್ಯಾಥೋಲಿಕ್ ಧರ್ಮಕ್ಕೆ ಸೇರಿರುವ ಬಿಡೆನ್ ಗರ್ಭಪಾತವನ್ನು ಹೇಗೆ ಬೆಂಬಲಿಸಲು ಸಾಧ್ಯ ಎಂಬರ್ಥದಲ್ಲಿ ಪ್ರಶ್ನೆ ಕೇಳಿದ್ದರು.
ಕ್ಯಾಥೋಲಿಕ್ ಧರ್ಮವು ಗರ್ಭಪಾತ ಮಾಡುವುದು ತಪ್ಪು ಎಂದು ಹೇಳಿದ್ದರೂ ಸಹ ಜೋ ಬಿಡೆನ್ ಹೇಗೆ ಗರ್ಭಪಾತಕ್ಕೆ ಬೆಂಬಲ ನೀಡುತ್ತಾರೆ ಎಂದು ಜೆನ್ಸೆನ್ ಪ್ರಶ್ನೆ ಕೇಳಿದ್ದರು.
ಈ ಪ್ರಶ್ನೆಗೆ ಉತ್ತರಿಸಿದ ಜೆನ್ ಸಾಕಿ, ಏಕೆಂದರೆ ಜೋ ಬಿಡೆನ್ ಗರ್ಭಪಾತವು ಹೆಣ್ಣಿನ ದೇಹಕ್ಕೆ ಸಂಬಂಧಿಸಿದ್ದು. ಹೀಗಾಗಿ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಆಕೆಗೆ ಇದೆ ಎಂದು ನಂಬಿದ್ದಾರೆ ಎಂದು ಹೇಳಿದ್ರು.
ಈ ವಿಚಾರದಲ್ಲಿ ಹೆಣ್ಣು ನಿರ್ಧಾರ ಕೈಗೊಳ್ಳುವಲ್ಲಿ ಸ್ವತಂತ್ರ್ಯಳಾಗಿರಬೇಕು ಎಂದು ಬಿಡೆನ್ ನಂಬಿದ್ದಾರೆ. ವೈದ್ಯರೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾದ ಅಧಿಕಾರ ಮಹಿಳೆಗೆ ಸಿಗಬೇಕು. ನನಗೆ ತಿಳಿದ ಹಾಗೆ ನೀವು ಎಂದೂ ಇಂತಹ ಪರಿಸ್ಥಿತಿಯನ್ನು ಎದುರಿಸಿರಲು ಸಾಧ್ಯವೇ ಇಲ್ಲ. ಅಥವಾ ನೀವೆಂದಿಗೂ ಗರ್ಭಿಣಿ ಆಗಲು ಕೂಡ ಸಾಧ್ಯವಿಲ್ಲ. ಆದರೆ ಗರ್ಭಾವಸ್ಥೆಯ ಸವಾಲುಗಳನ್ನು ಎದುರಿಸುವವರಿಗೆ ಮಾತ್ರ ಈ ಕಷ್ಟದ ಬಗ್ಗೆ ತಿಳಿದಿರುತ್ತದೆ. ಹೀಗಾಗಿ ಮಹಿಳೆಯ ನಿರ್ಧಾರವನ್ನು ಗೌರವಿಸಬೇಕು ಜೆನ್ ಹೇಳಿದ್ದಾರೆ.