ಜೀವಮಾನದಲ್ಲಿ ಒಮ್ಮೆಯಾದರೂ ಒಂದು ಸ್ಪೋರ್ಟ್ಸ್ ಕಾರನ್ನ ಹೊಂದಬೇಕೆಂಬ ಬಯಕೆ ಬಹುತೇಕ ಮಂದಿಗೆ ಇರುತ್ತೆ. ಆದರೆ ಇಂತಹ ಐಷಾರಾಮಿ ಕಾರುಗಳನ್ನ ಖರೀದಿ ಮಾಡೋದು ಎಲ್ಲರಿಂದಲೂ ಆಗುವ ಕೆಲಸವಲ್ಲ. ಹೀಗಾಗಿ ಅನೇಕರ ಪಾಲಿಗೆ ಈ ಆಸೆ ಕನಸಾಗಿಯೇ ಉಳಿದುಬಿಡುತ್ತೆ.
ಆದರೆ ನೂರುಲ್ ಹಾಕ್ ಎಂಬಾತ ಮಾತ್ರ ಕಡಿಮೆ ಖರ್ಚಿನಲ್ಲಿಯೇ ತನ್ನ ಈ ಕನಸನ್ನ ನನಸು ಮಾಡಿಕೊಂಡಿದ್ದಾನೆ. ಅರೆ..! ಕಡಿಮೆ ಹಣದಲ್ಲಿ ಅದ್ಯಾವ ಸ್ಪೋರ್ಟ್ಸ್ ಕಾರ್ ಸಿಕ್ಕಿರಬಹುದು ಎಂದು ಯೋಚನೆ ಮಾಡುತ್ತಿದ್ದೀರಾ..? ಅಸಲಿ ವಿಚಾರ ಬೇರೆಯದ್ದೇ ಇದೆ.
ಆಸ್ಸಾಂನ ಕರೀಂಗಂಜ್ ನಿವಾಸಿಯಾದ ನೂರುಲ್ ಒಬ್ಬ ಮೆಕ್ಯಾನಿಕ್ ಆಗಿದ್ದು ಈತ ಮಾರುತಿ ಸ್ವಿಫ್ಟ್ ಕಾರನ್ನ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್ ಕಾರನ್ನಾಗಿ ಮಾರ್ಪಾಡು ಮಾಡಿದ್ದಾರೆ. ತನ್ನ ಸ್ವಂತ ಗ್ಯಾರೇಜ್ ಎನ್ ಮಾರುತಿ ಕಾರ್ ಕೇರ್ನಲ್ಲಿ ಈ ರೀತಿ ಕಾರನ್ನ ಸಂಪೂರ್ಣ ಮಾರ್ಪಾಡು ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ನೂರುಲ್, ಈ ರೀತಿ ಕಾರನ್ನ ಮಾರ್ಪಾಡು ಮಾಡಲು ನಾನು 6.8 ಲಕ್ಷ ರೂಪಾಯಿಗಳನ್ನ ಖರ್ಚು ಮಾಡಿದ್ದೇನೆ. ಸ್ಪೋರ್ಟ್ಸ್ ಕಾರನ್ನ ಹೊಂದಬೇಕು ಅನ್ನೋದು ನನ್ನ ಕನಸಾಗಿತ್ತು. ನನಗೆ ಲ್ಯಾಂಬೋರ್ಗಿನಿ ಕಾರುಗಳು ಅಂದರೆ ತುಂಬಾನೇ ಇಷ್ಟ ಕೊನೆಗೂ ನಾನು ಮಾರುತಿ ಸ್ವಿಫ್ಟ್ ಕಾರನ್ನ ಮಾರ್ಪಾಡು ಮಾಡಿ ನನ್ನ ಕನಸನ್ನ ನನಸು ಮಾಡಿಕೊಂಡೆ ಎಂದು ಹೇಳಿದ್ದಾರೆ.
ಹಳದಿ ಬಣ್ಣದಲ್ಲಿರುವ ಈ ಕಾರು ನೋಡೋಕೆ ಅಸಲಿ ಲ್ಯಾಂಬೋರ್ಗಿನಿ ಕಾರಿನಂತೆಯೇ ಕಾಣುತ್ತದೆ. ಈ ಕಾರಿನ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.