ಮುಖದ ಸೌಂದರ್ಯವನ್ನು ಕೂದಲು ಹೆಚ್ಚಿಸುತ್ತದೆ. ಇಂದಿನ ಜೀವನ ಶೈಲಿಯಲ್ಲಿ ಕೂದಲ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ನಮ್ಮ ಅನೇಕ ತಪ್ಪುಗಳಿಂದ ಕೂದಲು ಉದುರುತ್ತದೆ.
ಸಾಮಾನ್ಯವಾಗಿ ಕೂದಲಿನ ಸೌಂದರ್ಯ ಹೆಚ್ಚಿಸಲು ಬ್ಯೂಟಿಪಾರ್ಲರ್ ಗೆ ಹೋಗುತ್ತಾರೆ. ಅಲ್ಲಿ ಅಥವಾ ಮನೆಯಲ್ಲಿ ಕೂದಲಿನ ಸೌಂದರ್ಯ ವೃದ್ಧಿಗೆ ಕೇಶವಿನ್ಯಾಸ ಯಂತ್ರಗಳನ್ನು ಬಳಸಲಾಗುತ್ತದೆ. ಆ ಕ್ಷಣ ಕೂದಲು ಚೆನ್ನಾಗಿ ಕಾಣುತ್ತದೆ. ಆದರೆ ಅದಕ್ಕೆ ಬಳಸುವ ರಾಸಾಯನಿಕ ಮತ್ತು ಶಾಖದಿಂದಾಗಿ ಕೂದಲಿಗೆ ಹಾನಿಯಾಗುತ್ತದೆ. ಇದ್ರಿಂದ ಕೂದಲು ಒಣಗಲು ಶುರುವಾಗುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಅವಸರದಲ್ಲಿ ತಲೆ ಸ್ನಾನ ಮಾಡುವ ಮಹಿಳೆಯರು ಒದ್ದೆ ಕೂದಲನ್ನು ಬಾಚಿಕೊಳ್ತಾರೆ. ಇದು ಕೂದಲು ಉದುರಲು ಮುಖ್ಯ ಕಾರಣವಾಗುತ್ತದೆ. ಒದ್ದೆಯಾದ ಕೂದಲನ್ನು ಬಾಚಿಕೊಳ್ಳುವುದ್ರಿಂದ ಕೂದಲು ದುರ್ಬಲವಾಗುತ್ತದೆ.
ಶಾಂಪೂ ಮಾಡಿದ ನಂತರ ಕೂದಲಿನ ಬೇರುಗಳು ತುಂಬಾ ದುರ್ಬಲವಾಗುತ್ತವೆ. ಆ ಸಮಯದಲ್ಲಿ ಕೂದಲನ್ನು ಬಾಚಿಕೊಂಡರೆ, ಅದು ಕೂದಲು ಉದುರಲು ಕಾರಣವಾಗುತ್ತದೆ.
ಉದ್ದನೆಯ ಕೂದಲನ್ನು ಬಯಸುವವರು ಕೂಡ ಕೂದಲನ್ನು ಟ್ರಿಮ್ ಮಾಡುವುದು ಬಹಳ ಮುಖ್ಯ. ಇದು ಕೂದಲಿನ ಆರೋಗ್ಯ ಕಾಪಾಡುತ್ತದೆ. ತುದಿಯಲ್ಲಿ ವಿಭಜಿತ ಕೂದಲನ್ನು ಕತ್ತರಿಸುವುದ್ರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ.
ಕೆಲವು ಮಹಿಳೆಯರು ಬಿಗಿಯಾಗಿ ಕೂದಲನ್ನು ಕಟ್ಟುತ್ತಾರೆ. ಇದು ಮುಖದ ಸೌಂದರ್ಯ ಹೆಚ್ಚಿಸುತ್ತದೆ. ಆದ್ರೆ ತೆಳ್ಳಗಿನ ಕೂದಲಿದ್ದವರಿಗೆ ಇದು ಹಾನಿಕಾರಿ. ಕೂದಲಿನ ಮೇಲೆ ಒತ್ತಡ ಹೆಚ್ಚುತ್ತದೆ.