ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದೇಶಾದ್ಯಂತ ಸಂಚಲನ ಮೂಡಿಸಿದೆ. ಜನರ ಬೇಡಿಕೆಯನ್ನು ಪೂರೈಸಲಾಗದೇ ಓಲಾ ಪರದಾಡುತ್ತಿದೆ. ಈ ನಡುವೆಯೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮಹತ್ವದ ಘೋಷಣೆಗೆ ಮುಂದಾಗಿದೆ.
ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಶುಕ್ರವಾರ ಭಾರತದಲ್ಲಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಘೋಷಿಸುವ ಮಹತ್ವದ ಸುಳಿವು ನೀಡಿದ್ದಾರೆ. ಟ್ವಿಟರ್ನಲ್ಲಿ ಅಗರ್ವಾಲ್, ಪಿಕ್ಚರ್ ಅಭಿ ಬಾಕಿ ಹೈ ಮೇರೇ ದೋಸ್ತ್. ಆಗಸ್ಟ್ 15ರಂದು ಮಧ್ಯಾಹ್ನ 2 ಗಂಟೆಗೆ ಭೇಟಿಯಾಗೋಣ ಎಂದು ಪೋಸ್ಟ್ ಮಾಡಿದ್ದಾರೆ.
ಟೀಸರ್ ವಿಡಿಯೊದಂತೆ ರಸ್ತೆಯಲ್ಲಿ ಕಾರು ಓಡುವ ವಿಡಿಯೋವನ್ನು ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಓಲಾ ಭಾರತಕ್ಕೆ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಹೊರತರಲು ಯೋಜಿಸುತ್ತಿದೆ ಎಂದು ಕೆಲವೇ ವಾರಗಳ ಹಿಂದೆ ಅವರು ಹೇಳಿಕೊಂಡಿದ್ದರು. ಅದರ ಮುಂದುವರಿದ ಭಾಗವಾಗಿ ಈ ಟ್ವೀಟ್ ಬಂದಿದೆ.
ಪ್ರಸ್ತುತ, ಓಲಾ ಎಲೆಕ್ಟ್ರಿಕ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸ್ಕೂಟರ್ಗಳನ್ನು ಉತ್ಪಾದಿಸುತ್ತಿದೆ. ಈಗ ಸಂಸ್ಥೆಯು ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದರೆ, ಆ ಮೂಲಕ ಮಾರುಕಟ್ಟೆಯಲ್ಲಿ ಪ್ರಮುಖ ಪ್ಲೇಯರ್ಗಳ ಜತೆಗೆ ಸ್ಪರ್ಧೆಗಿಳಿಯುವುದು ದಿಟ.
ಈಗಾಗಲೇ ಮಾರುಕಟ್ಟೆಯಲ್ಲಿ ಚಾಲನೆಯಲ್ಲಿರುವ ಟಾಟಾ ಮೋಟಾರ್ಸ್ ಮತ್ತು ಎಂಜಿ, ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಜನಪ್ರಿಯ ಮಾದರಿಗಳ ಎಲೆಕ್ಟ್ರಿಕ್ ಎಡಿಷನ್ಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಹ್ಯುಂಡೈ, ಕಿಯಾ ಮೋಟಾರ್ಸ್ ಮತ್ತು ಮೋಲ್ವೋ ಸಹ ಭಾರತಕ್ಕೆ ಇವಿ ರೂಪಾಂತರಗಳನ್ನು ತರಲು ಯೋಜಿಸುತ್ತಿವೆ.
ಇತ್ತೀಚೆಗೆ, ಓಲಾ ಎಲೆಕ್ಟ್ರಿಕ್ ಬ್ಯಾಟರಿ ತಂತ್ರಜ್ಞಾನಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕಾಗಿ 500 ಮಿಲಿಯನ್ ಡಾಲರ್ ಹೂಡಿಕೆಯನ್ನು ಘೋಷಿಸಿದೆ.