ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಹಾಲು ಸೇವನೆ ಮಾಡಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡ್ತಾರೆ. ಹಾಲನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಚಹಾ, ಕಾಫಿ ಸೇರಿದಂತೆ ಹಲವು ಪಾನೀಯಗಳಿಗೆ ಹಾಲನ್ನು ಬಳಸುತ್ತೇವೆ.
ಹಾಲನ್ನು ಹಸಿಯಾಗಿ ಕುಡಿಯುವುದು ಒಳ್ಳೆಯದೋ ಅಥವಾ ಕುದಿಸಿ ಕುಡಿಯಬೇಕೋ ಎಂಬ ಗೊಂದಲ ಸಹಜ. ಹಸಿ ಹಾಲು ಕುಡಿಯುವುದರಿಂದ ಆರೋಗ್ಯ ಕೆಡುತ್ತದೆ ಎಂಬುದು ಸತ್ಯ. ಅಮೆರಿಕದ ಆರೋಗ್ಯ ಸಂರಕ್ಷಣಾ ಸಂಸ್ಥೆಯ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಹಸಿ ಹಾಲಿನಲ್ಲಿ ಎಸ್ಚೆರಿಚಿಯಾ ಕೋಲಾ (ಇ. ಕೋಲಿ) ಮತ್ತು ಲಿಸ್ಟೇರಿಯಾ, ಸಾಲ್ಮೊನೆಲ್ಲಾ ಇತ್ಯಾದಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುತ್ತವೆ. ಹಾಗಾಗಿ ಹಸಿ ಹಾಲು ಕುಡಿದರೆ ಫುಡ್ ಪಾಯ್ಸನ್ ಆಗುವ ಅಪಾಯವಿರುತ್ತದೆ.
ಹಸಿ ಹಾಲಿನಲ್ಲಿರುವ ಬ್ಯಾಕ್ಟೀರಿಯಾವು ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ. ಇದು ಅತಿಸಾರ, ಸಂಧಿವಾತ ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಸಿ ಹಾಲು ಕುಡಿಯುವುದು ಹಾನಿಕಾರಕ ಏಕೆಂದರೆ ಹಸುವಿನ ಕೆಚ್ಚಲು ಕೊಳಕಾಗಿರುವ ಸಾಧ್ಯತೆ ಇರುತ್ತದೆ.
ಶುದ್ಧ ಕೈ ಮತ್ತು ಶುದ್ಧ ಪಾತ್ರೆಗಳನ್ನು ಬಳಸದಿದ್ದರೆ ಹಾಲಿನಲ್ಲಿ ಕೊಳಕು ಬರಬಹುದು. ಹಾಗಾಗಿ ಹಾಲನ್ನು ಕುದಿಸಿದ ನಂತರ ಕುಡಿಯುವುದು ಅವಶ್ಯಕ. ಅಕಸ್ಮಾತ್ ಹಾಲಿನಲ್ಲಿ ಬ್ಯಾಕ್ಟೀರಿಯಾಗಳಿದ್ದರೂ ಕುದಿಸಿದಾಗ ಅವೆಲ್ಲವೂ ಸಾಯುತ್ತವೆ.