ಐಪಿಎಸ್ ಅಧಿಕಾರಿಯಾಗಬೇಕು ಎಂಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಎಲ್ಲಾ ಸವಾಲುಗಳನ್ನು ಎದುರಿಸಿದ ಮನೋಜ್ ಕುಮಾರ್ ಶರ್ಮಾ ಇಂದು ಅನೇಕರಿಗೆ ಸ್ಪೂರ್ತಿ ಎನಿಸಿದ್ದಾರೆ, ಮಧ್ಯಪ್ರದೇಶ ಮೊರೇನಾದವರಾದ ಮನೋಜ್ ಶರ್ಮಾ ತಮ್ಮ ಯಶಸ್ಸಿನ ಹಾದಿಯ ನಡುವೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ.
12ನೆ ತರಗತಿಯಲ್ಲಿ ಅನುತ್ತೀರ್ಣರಾಗಿದ್ದು ಹಾಗೂ 9 ಮತ್ತು 10ನೇ ತರಗತಿಯಲ್ಲಿ ಮೂರನೇ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದ ಸಾಮಾನ್ಯ ವಿದ್ಯಾರ್ಥಿಯೊಬ್ಬ ತನ್ನ ಸಾಮರ್ಥ್ಯದ ಬಗ್ಗೆ ಎಂದಿಗೂ ಅನುಮಾನಪಟ್ಟುಕೊಳ್ಳದೇ ಅಂದುಕೊಂಡ ಗುರಿಯನ್ನು ಸಾಧಿಸಿಯೇಬಿಟ್ಟಿದ್ದಾರೆ.
ಗ್ವಾಲಿಯರ್ನಲ್ಲಿ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮನೋಜ್ ಅದರ ಜೊತೆಯಲ್ಲಿ ಯುಪಿಎಸ್ಸ್ಸಿ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿಯಂತೂ ತೀರಾ ಕೆಳ ಹಂತದಲ್ಲಿತ್ತು. ಸರಿಯಾಗಿ ಒಂದು ಮನೆಯೂ ಇಲ್ಲದ ಬಡತನದ ನಡುವೆಯೂ ಮನೋಜ್ ಅಂದುಕೊಂಡ ಗುರಿಯನ್ನು ಸಾಧಿಸಿದ್ದಾರೆ.
ದೆಹಲಿಯಲ್ಲಿ ಲೈಬ್ರರಿಯೊಂದರಲ್ಲಿ ಡಿ ದರ್ಜೆ ನೌಕರನಾಗಿದ್ದ ಮನೋಜ್ ಈ ವೇಳೆಯಲ್ಲಿ ಗೋರ್ಕಿ, ಲಿಂಕನ್ ಹಾಗೂ ಮುಕ್ತಬೋಧ್ರಂತಹ ಗಮನಾರ್ಹ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿದ್ದರಂತೆ. ಈ ಪುಸ್ತಕಗಳು ಮನೋಜ್ಗೆ ಜೀವನದ ವಾಸ್ತವದ ಬಗ್ಗೆ ಆಳವಾದ ತಿಳುವಳಿಕೆ ಮೂಡುವಂತೆ ಮಾಡಿತ್ತು.
ಆರಂಭಿಕ ವೈಫಲ್ಯಗಳಿಂದ ಹಿಂಜರಿಯದ ಮನೋಜ್ ಯುಪಿಎಸ್ಸಿಯಲ್ಲಿ ನಾಲ್ಕು ಪ್ರಯತ್ನಗಳನ್ನು ಮಾಡಿದ್ದರು. ಮೊದಲ ಮೂರು ಪ್ರಯತ್ನದಲ್ಲಿ ನಿರಾಸೆ ಅನುಭವಿಸಿದ್ದ ಮನೋಜ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಅಖಿಲ ಭಾರತದ ಶ್ರೇಣಿಯಲ್ಲಿ 121ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಇಂದು ಮನೋಜ್ ಮುಂಬೈ ಪೊಲೀಸ್ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋಜ್ ಶರ್ಮಾ ತಮ್ಮ ದಕ್ಷ ಸೇವೆಯಿಂದ ಸಿಂಗಂ ಎಂಬ ಬಿರುದನ್ನೂ ಪಡೆದುಕೊಂಡಿದ್ದಾರೆ.