
ಭಾನುವಾರದಿಂದ ಆರಂಭಗೊಳ್ಳಲಿರುವ ಐಪಿಎಲ್ 2ನೇ ಸೀಸನ್ಗೆ ಪ್ರೇಕ್ಷಕರನ್ನು ಭಾಗಶಃ ಅನುಮತಿಸುವುದಾಗಿ ಬಿಸಿಸಿಐ ಹಾಗೂ ಅರಬ್ ಸರ್ಕಾರವು ಅಧಿಕೃತ ಮಾಹಿತಿ ನೀಡಿವೆ.
ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕರ ಆಗಮನಕ್ಕೆ ಬಿಸಿಸಿಐ ಹಾಗೂ ಅರಬ್ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಅಧಿಕೃತ ಮಾಹಿತಿ ನೀಡಿದ್ದಾರೆ. ಸ್ಟೇಡಿಯಂನಲ್ಲಿ ಯಾವುದೇ ಕಾರಣಕ್ಕೂ ಕೊರೊನಾ ಸೋಂಕು ತಗುಲದಂತೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಸಕಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆ ಪಡೆದವರು ಮಾತ್ರ ಐಪಿಎಲ್ ಕ್ರಿಕೆಟ್ ನ್ನು ಮೈದಾನದಲ್ಲಿ ಕೂತು ವೀಕ್ಷಿಸಬಹುದು ಎಂದು ಅರಬ್ ಸರ್ಕಾರ ಹೇಳಿದೆ. ಅರಬ್ ರಾಷ್ಟ್ರಗಳಲ್ಲಿ ಕೊರೊನಾ ಸಂಖ್ಯೆಯು ಕ್ಷೀಣಿಸುತ್ತಿದೆ. ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲ. ಆದರೆ ಸದ್ಯಕ್ಕೆ ಪ್ರೇಕ್ಷಕರಿಗೆ ಮೈದಾನಕ್ಕೆ ಅವಕಾಶ ನೀಡಿದ್ದೇವೆ ಎಂದು ಬಿಸಿಸಿಐ ಹೇಳಿದೆ.
ಐಪಿಎಲ್ 2ನೇ ಸೀಸನ್ ಭಾನುವಾರದಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. 27 ದಿನಗಳಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ.