ಬ್ರಿಟನ್ ಮಾಜಿ ಪ್ರಧಾನಿ ವಿನ್ಸ್‌ಟನ್ ಚರ್ಚಿಲ್‌ಗೆ ಪ್ರಿಯವಾಗಿದ್ದ ಜಾನಿ ವಾಕರ್ ಬ್ಲಾಕ್ ಲೇಬಲ್ ವಿಸ್ಕಿ ಹಾಗೂ ಬ್ರಾಂಡಿ ಬಾಟಲ್‌ಗಳನ್ನು ಜಗ್ ಮತ್ತು ಗ್ಲಾಸ್‌ಗಳೊಂದಿಗೆ ಚಿತ್ರಿಸಿರುವ ತೈಲ ಚಿತ್ರವೊಂದು ಭಾರೀ ಸುದ್ದಿ ಮಾಡಿದೆ.
ಇಂಗ್ಲೆಂಡ್‌ನ ಆಗ್ನೇಯದಲ್ಲಿರುವ ಚಾರ್ಟ್‌ವೆಲ್ ಪ್ರದೇಶದಲ್ಲಿರುವ ಚರ್ಚಿಲ್‌ರ ಹಳ್ಳಿ ಮನೆಯಲ್ಲಿ ಈ ಚಿತ್ರವನ್ನು ಬಿಡಿಸಲಾಗಿದೆ. ’ಜಗ್ ವಿತ್ ಬಾಟಲ್ಸ್’ ಹೆಸರಿನ ಈ ತೈಲ ಚಿತ್ರ ಹರಾಜಿನಲ್ಲಿ 250,000 ಪೌಂಡ್‌ಗಳಿಗೆ ಬಿಕರಿಯಾಗುವ ಸಾಧ್ಯತೆ ಇದೆ.
ಖುದ್ದು ಪೇಂಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಚರ್ಚಿಲ್ ಈ ಪೇಂಟಿಂಗ್ ಅನ್ನು 1930ರಲ್ಲಿ ಮಾಡಿದ್ದು, ಅದನ್ನು ಅಮೆರಿಕದ ಉದ್ಯಮಿ ಅವೆರೆಲ್ ಹ್ಯಾರಿಮನ್‌ಗೆ ಕೊಟ್ಟಿದ್ದರು. ಹ್ಯಾರಿಮನ್ 1940ರ ದಶಕದಲ್ಲಿ ಯೂರೋಪ್‌ನ ಅಮೆರಿಕ ವಿಶೇಷ ಪ್ರತಿನಿಧಿಯಾಗಿ ಹೊಣೆಗಾರಿಕೆ ನಿರ್ವಹಿಸಿದ್ದರು.
ಸಮಾನಮನಸ್ಕ ಜನರಿಗೆ ಚರ್ಚಿಲ್ ತಮ್ಮ ಮೆಚ್ಚಿನ ಚಿತ್ರಗಳನ್ನು ಕೊಡುತ್ತಿದ್ದರು ಎನ್ನಲಾಗಿದೆ.