ಜಗತ್ತಿನಲ್ಲಿ ಪ್ರತಿನಿತ್ಯ ಬೈಕು, ಕಾರು ಕಳ್ಳತನದ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರ್ತಾನೇ ಇರುತ್ವೆ. ಅಮೆರಿಕದಲ್ಲಿ ನಡೆದ ವಿಚಿತ್ರ ಪ್ರಕರಣವೊಂದರಲ್ಲಿ ಕಳ್ಳ ಕಾರನ್ನ ತೆಗೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ಕದ್ದ ಕಾರಿನ ಸಮೇತ ವಾಪಸ್ಸಾಗಿದ್ದಾನೆ. ಅಂದಹಾಗೆ ಇದಕ್ಕೆ ಕಾರಣ ಕಾರಿನೊಳಗಿದ್ದ ಮಗು. ಕಾರಿನ ಸಮೇತ ವಾಪಾಸ್ ಬಂದ ಕಳ್ಳ ಮಗುವನ್ನ ತಾಯಿಯ ಕೈಗೆ ಒಪ್ಪಿಸಿದ್ದಾನೆ.
ಬೇವರ್ಟೋನ್ನ ಕಿರಾಣಿ ಅಂಗಡಿಯೊಂದರ ಸಮೀಪದಲ್ಲಿ ಜನವರಿ 16ರಂದು ಈ ಘಟನೆ ವರದಿಯಾಗಿದೆ. ಅಂಗಡಿ ಮುಂದೆ ಕಾರನ್ನ ಪಾರ್ಕ್ ಮಾಡಿದ್ದ ಮಹಿಳೆ ಹಾಲು ಹಾಗೂ ಮಾಂಸವನ್ನ ಖರೀದಿ ಮಾಡಲು ಅಂಗಡಿಗೆ ತೆರಳಿದ್ದರು. ಈ ವೇಳೆ ತಮ್ಮ ಕಾರಿನಲ್ಲಿಯೇ ಮಗುವನ್ನ ಬಿಟ್ಟು ಹೋಗಿದ್ದಾರೆ. ಹಾಗಂತ ಈ ಮಹಿಳೆ ಕಾರಿನಿಂದ ಕೇವಲ 15 ಫೀಟ್ ದೂರದಲ್ಲಿ ಇದ್ದರು. ಈ ವೇಳೆ ಬಂದ ಕಳ್ಳ ಕಾರು ಚಲಾವಣೆಯಲ್ಲಿರೋದನ್ನ ಕಂಡು ಅದನ್ನ ಡ್ರೈವ್ ಮಾಡಿಕೊಂಡು ಹೋಗಿದ್ದಾನೆ.
ಆದರೆ ಕಾರನ್ನ ಸ್ವಲ್ಪ ದೂರ ತೆಗೆದುಕೊಂಡು ಹೋಗ್ತಿದ್ದಂತೆಯೇ ಹಿಂಬದಿ ಸೀಟಿನಲ್ಲಿ ನಾಲ್ಕು ವರ್ಷದ ಮಗು ಇದೆ ಅನ್ನೋದು ತಿಳಿದು ಬಂದಿದೆ. ಪುನಃ ಕಾರನ್ನ ಕದ್ದ ಸ್ಥಳಕ್ಕೇ ಕೊಂಡೊಯ್ದ ಕಳ್ಳ ಮಗುವನ್ನ ತಾಯಿಗೆ ವಾಪಸ್ ಮಾಡಿದ್ದಾನೆ. ಬಳಿಕ ಕಾರು ಸಮೇತ ಆತ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳ್ಳ ಸರಿಸುಮಾರು 20 ರಿಂದ 30 ವರ್ಷದವನಾಗಿರಬಹುದು ಎಂದು ಅಂದಾಜಿಸಲಾಗಿದೆ. ಆತ ಮಗುವನ್ನ ತಾಯಿಗೆ ಹಿಂದಿರುಗಿಸಿದ್ದು ಮಾತ್ರವಲ್ಲದೇ ಆಕೆಗೆ ಈ ರೀತಿ ಕಾರಿನಲ್ಲಿ ಮಗುವನ್ನ ಒಂಟಿಯಾಗಿ ಬಿಡಬೇಡಿ ಎಂದು ಹೇಳಿ ಬಳಿಕ ಕಾರು ಕದ್ದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಗಂಟೆಗಳ ಬಳಿಕ ಪೊಲೀಸರು ಕಾರನ್ನ ವಶಕ್ಕೆ ಪಡೆಯುವಲ್ಲಿ ಯಶಸ್ಚಿಯಾಗಿದ್ದಾರೆ. ಆದರೆ ಕಳ್ಳ ಪರಾರಿಯಾಗಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.