ಅಮೆರಿಕ ಹಾಗೂ ಸ್ವಿಡ್ಜರ್ಲ್ಯಾಂಡ್ನ ಇಬ್ಬರು ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಶಿಖರದಲ್ಲಿ ಸಾವನ್ನಪ್ಪಿದ್ದಾರೆ. ಇದು ಮೌಂಟ್ ಎವರೆಸ್ಟ್ನಲ್ಲಿ ವರದಿಯಾದ ಈ ವರ್ಷದ ಮೊದಲ ಸಾವಾಗಿದೆ ಎಂದು ನೇಪಾಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬುಧವಾರ ಇಬ್ಬರು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ ಎಂದು ಸೆವೆನ್ ಸಮಿಟ್ ಟ್ರೆಕ್ನ ಮಿಂಗ್ಮಾ ಶೆರ್ಪಾ ಮಾಹಿತಿ ನೀಡಿದ್ರು. ಸ್ವಿಡ್ಜರ್ಲ್ಯಾಂಡ್ನ ಪರ್ವತಾರೋಹಿ ಶಿಖರವನ್ನ ತಲುಪಿದ ಬಳಿಕ ಸಾವನ್ನಪ್ಪಿದ್ರು. ಅವರು ಆಯಾಸದಿಂದ ಬಳಲುತ್ತಿದ್ದರು ಎಂದು ಇದೇ ಸಂಘಟನೆಯ ಚಾಂಗ್ ದವಾ ಶೆರ್ಪಾ ಹೇಳಿದ್ದಾರೆ.
ನಾವು ಎರಡು ಹೆಚ್ಚುವರಿ ಶೆರ್ಪಾಗಳ ಕೈಯಲ್ಲಿ ವೈದ್ಯಕೀಯ ಆಮ್ಲಜನಕ ಹಾಗೂ ಆಹಾರವನ್ನ ಕೊಟ್ಟು ಕಳಿಸಿದ್ದೆವು. ಆದರೂ ಸಹ ಪರ್ವತಾರೋಹಿಯನ್ನ ಉಳಿಸಲು ಸಾಧ್ಯವಾಗಲಿಲ್ಲ ಎಂದು ಚಾಂಗ್ ಹೇಳಿದ್ದಾರೆ.
ಇನ್ನು ಅಮೆರಿಕದ ಪರ್ವತಾರೋಹಿ ಕೂಡ ಹಿಮ ಕುರುಡುತನ ಹಾಗೂ ಆಯಾಸದಿಂದ ಬಳಲುತ್ತಿದ್ದರು. ಕ್ಯಾಂಪ್ 4ನ್ನು ತಲುಪಿದ್ದ ಪರ್ವತಾರೋಹಿ ಬಳಿಕ ಸಾವನ್ನಪ್ಪಿದ್ದರು ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಎವರೆಸ್ಟ್ನಲ್ಲಿ ಪರ್ವತಾರೋಹಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರ್ತಿದೆ. ಇದು ಜನದಟ್ಟಣೆ ಹಾಗೂ ಅನೇಕ ಸಾವುಗಳಿಗೆ ಕಾರಣವಾಗಿದೆ ಎನ್ನಲಾಗಿದೆ.
ಎವರೆಸ್ಟ್ನಲ್ಲಿ ಜನದಟ್ಟಣೆಯನ್ನ ನಿಯಂತ್ರಿಸುವ ಸಲುವಾಗಿ ನೇಪಾಳ ಪ್ರವಾಸೋದ್ಯಮ ಇಲಾಖೆ ಹಲವು ಮಹತ್ವದ ಕ್ರಮಗಳನ್ನ ಕೈಗೊಳ್ಳುತ್ತಿದೆ. ಕಳೆದ ವರ್ಷ ಕೊರೊನಾದಿಂದಾಗಿ ಪರ್ವತಾರೋಹಿಗಳ ಸಂಖ್ಯೆ ಇಳಿಮುಖವಾಗಿತ್ತು. ಆದರೆ ನೇಪಾಳ ಪ್ರವಾಸೋದ್ಯಮ ಇಲಾಖೆ ಹೆಚ್ಚೆಚ್ಚು ಪರ್ವತಾರೋಹಿಗಳನ್ನ ಸೆಳೆಯುವ ಸಲುವಾಗಿ ಮಾರ್ಗಸೂಚಿಗಳನ್ನ ಸಡಿಲಗೊಳಿಸಿದೆ.