ಪ್ರಚೋದನಾತ್ಮಕ ವಿಡಿಯೋಗಳ ಮೂಲಕವೇ ಕುಖ್ಯಾತಿ ಪಡೆದಿರುವ ಯುಟ್ಯೂಬ್ ಸ್ಟಾರ್ ಸಹೋದರರಾದ ಎಲನ್ ಹಾಗೂ ಎಲೆಕ್ಸ್ ಕ್ಯಾಲಿಫೋರ್ನಿಯಾದಲ್ಲಿ ನಕಲಿ ಬ್ಯಾಂಕ್ ದರೋಡೆ ಆರೋಪದಡಿಯಲ್ಲಿ ಅಪರಾಧಿಗಳು ಎಂದು ಪರಿಗಣಿಸಲಾಗಿದೆ.
23 ವರ್ಷದ ಈ ಸಹೋದರರಿಗೆ ಹಿಂಸಾಚಾರ, ಅಪಾಯ ಹಾಗೂ ವಂಚನೆ ಆರೋಪದಡಿಯಲ್ಲಿ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಇಬ್ಬರು ದುಷ್ಕರ್ಮಿಗಳ ಮೇಲೆ 2019ರ ಅಕ್ಟೋಬರ್ 15ರಂದು ಇರ್ವಿನ್ ನಗರದಲ್ಲಿ ನಡೆದ ತುರ್ತು ಪರಿಸ್ಥಿತಿ ಬಗ್ಗೆ ತಪ್ಪಾದ ವರದಿ ಮಾಡಿದ ಆರೋಪವನ್ನೂ ಹೊರಿಸಲಾಗಿದೆ. ಆರೆಂಜ್ ಕೌಂಟಿ ಜಿಲ್ಲಾ ಅಟಾರ್ನಿ ಕಾರ್ಯಾಲಯದ ಪ್ರಕಾರ, ಈ ಆರೋಪಗಳಿಗೆ 5ವರ್ಷಗಳವರೆಗೆ ಜೈಲು ಶಿಕ್ಷೆ ಸಿಗಲಿದೆ.
ಯುಟ್ಯೂಬ್ನಲ್ಲಿ 7 ಮಿಲಿಯನ್ಗೂ ಅಧಿಕ ಚಂದಾದಾರರನ್ನ ಹೊಂದಿರುವ ಈ ಸಹೋದರರಿಗೆ ಪ್ರಚೋದನಾತ್ಮಕ ವಿಡಿಯೋಗಳನ್ನ ಬಿತ್ತರಿಸದಂತೆ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.
ಎಲಾನ್ ಹಾಗೂ ಎಲೆಕ್ಸ್ ಜನರನ್ನ ರಂಜಿಸುವ ಸಲುವಾಗಿ ನಕಲಿ ದರೋಡೆಯ ಪ್ಲಾನ್ ಮಾಡಿದ್ದರು. ಹಣವನ್ನ ದರೋಡೆ ಮಾಡಿದಂತೆ ನಟಿಸಿ ಹಣದ ಬ್ಯಾಗ್ನ್ನು ಊಬರ್ ಚಾಲಕನ ಕಾರಿನಲ್ಲಿಟ್ಟಿದ್ದರು. ಆದರೆ ಇದು ಪ್ರ್ಯಾಂಕ್ ಎಂದು ಅರಿವಿಲ್ಲದ ಪೊಲೀಸ್ ಅಧಿಕಾರಿ ಊಬರ್ ಚಾಲಕನಿಗೆ ಗನ್ ತೋರಿಸಿದ್ದರು. ಈ ರೀತಿ ಊಬರ್ ಚಾಲಕನ ಪ್ರಾಣಕ್ಕೆ ಸಂಚಕಾರ ತರುವಂತಹ ವಿಡಿಯೋವನ್ನ ಶೂಟ್ ಮಾಡಿದ ಆರೋಪದಡಿಯಲ್ಲಿ ಇವರನ್ನ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಈ ವಿಡಿಯೋವನ್ನ 10 ತಿಂಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು 73 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ.