ಖಾಸಗಿ ಮೃಗಾಲಯದಿಂದ ಟರ್ಕಿ ಪಕ್ಷಿಯನ್ನ ಕದ್ದು ಅದಕ್ಕೆ ವಿಚಿತ್ರ ಹಿಂಸೆ ನೀಡಿದ ಮೂವರನ್ನ ಯುರೋಪ್ನ ಲಾಟ್ವಿಯಾದ ಪೊಲೀಸರು ಬಂಧಿಸಿದ್ದಾರೆ.
ಲಾಟ್ವಿಯಾದ ರಾಜಧಾನಿ ರಿಗಾದಲ್ಲಿ ಬುಧವಾರ ಖಾಸಗಿ ಮೃಗಾಲಯಕ್ಕೆ ಎಂಟ್ರಿ ಕೊಟ್ಟ ಮೂವರು ಕಪ್ಪು ಚೀಲದಲ್ಲಿ ಟರ್ಕಿಯನ್ನ ತುಂಬಿಕೊಂಡು ಪರಾರಿಯಾಗಿದ್ದರು. ಈ ದೃಶ್ಯ ಖಾಸಗಿ ಝೂನ ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿತ್ತು.
30 ರಿಂದ 40 ವರ್ಷದವರಾದ ಮೂವರು ಕದ್ದ ಪಕ್ಷಿಯನ್ನ ಜುರ್ಮಲಾದ ಕಡಲತೀರದಲ್ಲಿದ್ದ ರೆಸಾರ್ಟ್ಗೆ ಕರೆದೊಯ್ದಿದ್ದರು. ಈ ಮೂವರಲ್ಲಿ ಓರ್ವನ ಬರ್ತಡೇ ಸೆಲೆಬ್ರೇಟ್ ಮಾಡಿದ ಮೂವರು ವೈನ್ ಕುಡಿದು ಬಳಿಕ ಟರ್ಕಿಗೆ ಒತ್ತಾಯಪೂರ್ವಕವಾಗಿ ವೈನ್ ಕುಡಿಸಿ ಚಿತ್ರಹಿಂಸೆ ನೀಡಿದ್ದಾರೆ.
ಈ ವಿಚಾರ ಬೆಳಕಿಗೆ ಬರ್ತಿದ್ದಂತೆ ಅಲರ್ಟ್ ಆದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಹಾಗೂ ಟರ್ಕಿ ಪಕ್ಷಿ ತನ್ನ ಮೃಗಾಲಯಕ್ಕೆ ವಾಪಸ್ಸಾಗಿದೆ. ಆರೋಪಿಗಳ ವಿರುದ್ಧ ಗೂಂಡಾಗಿರಿ ಸೇರಿದಂತೆ ಇನ್ನಿತರ ಪ್ರಕರಣ ಹಾಗೂ ದಂಡ ವಿಧಿಸಲಾಗಿದೆ.