ಕಳ್ಳರ ಗ್ಯಾಂಗ್ವೊಂದು ಹೊಸ ವರ್ಷದ ಮುನ್ನಾ ದಿನದಂದು ವಿಮಾನ ನಿಲ್ದಾಣಕ್ಕೆ ನುಗ್ಗಿ ವಿಮಾನವನ್ನೇ ಕದ್ದು ಎಸ್ಕೇಪ್ ಆದ ವಿಚಿತ್ರ ಘಟನೆ ಅರಿಜೋನಾದ ಕಾಟನ್ವುಡ್ನಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಠಾಣೆ ಪೊಲೀಸರು ಕಳ್ಳರು ಹಾಗೂ ವಿಮಾನಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಗೂ ಮುನ್ನ ಕಾಟನ್ವುಡ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕಳ್ಳರು ಮುಖ್ಯ ದ್ವಾರವನ್ನ ನಿಷ್ಕ್ರಿಯಗೊಳಿಸಿ ಬಳಿಕ ಅದನ್ನ ಬಲವಂತದಿಂದ ತೆರೆಯುವ ಮೂಲಕ ವಿಮಾನ ನಿಲ್ದಾಣದ ಒಳಕ್ಕೆ ನುಗ್ಗಿದ್ದರು ಅಂತಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದ ಒಳಕ್ಕೆ ನುಗ್ಗಿದ ಕಳ್ಳರು ವಿಮಾನವನ್ನ ಒಳಗೊಂಡ ಬಾಕ್ಸ್ ಟ್ರೇಲರ್ನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳತನವಾದ ವಸ್ತುಗಳ ಒಟ್ಟು ಮೊತ್ತ ಅಂದಾಜು 58,58,600 ಇರಬಹುದೆಂದು ಅಂದಾಜಿಸಲಾಗಿದೆ.
ಪೊಲೀಸರು ಈ ವಿಚಾರವನ್ನ ಫೇಸ್ಬುಕ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದು N153PR ಸಂಖ್ಯೆಯ ಕೆಂಪು ಹಾಗೂ ಬಿಳಿ ಬಣ್ಣದ ಸಣ್ಣ ವಿಮಾನ ಎಂದು ಮಾಹಿತಿ ನೀಡಿದ್ದಾರೆ. ವಿಮಾನ ಹಾಗೂ ಕಳ್ಳರ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ಘೋಷಿಸೋದಾಗಿ ಪೊಲೀಸರು ಹೇಳಿದ್ದಾರೆ.