ಜಗತ್ತಿನಾದ್ಯಂತ ಇರುವ ಫ್ಯಾನ್ಸಿ ರೆಸ್ಟೋರೆಂಟ್ ಗಳು ತಮ್ಮ ಗ್ರಾಹಕರಿಗೆ ನಾನಾ ರೀತಿಯ ಅನುಭೂತಿ ನೀಡಲು ನೋಡುತ್ತಿರುತ್ತವೆ. ಆದರೆ, ನೀವೆಂದಾದರೂ ಒಂದಷ್ಟು ಎತ್ತರದಲ್ಲಿ ತೇಲಾಡುತ್ತಾ ಕೆಲಸ ಮಾಡುವುದನ್ನು ಊಹಿಸಿದ್ದೀರಾ?
ಬೆಲ್ಜಿಯಂನಲ್ಲಿರುವ ‘Dinner in the Sky’ ಹೆಸರಿನ ರೆಸ್ಟಾರಂಟ್ ಈ ಕೆಲಸವನ್ನು ಸಾಧ್ಯವಾಗಿಸಿದೆ. ಕ್ರೇನ್ ಸಹಾಯದಿಂದ 164 ಅಡಿಗಳಷ್ಟು ಮೇಲೆತ್ತಲ್ಪಡುವ ಟೇಬಲ್ ಸುತ್ತಲೂ ತಮ್ಮ ಸೊಂಟಕ್ಕೆ ಬೆಲ್ಟ್ ತಗುಲಿ ಹಾಕಿಕೊಂಡು ಗ್ರಾಹಕರು ಕುಳಿತುಕೊಳ್ಳುತ್ತಾರೆ. 2006ರಲ್ಲಿ ಆರಂಭಗೊಂಡ ಈ ರೆಸ್ಟೋರೆಂಟ್ ರೀತಿಯವು ಜಗತ್ತಿನಾದ್ಯಂತ 60ರಷ್ಟು ಇವೆ.
ರಾಜಧಾನಿ ಬ್ರಸ್ಸೆಲ್ಸ್ ನ ಜನಪ್ರಿಯ ಪ್ರವಾಸಿ ತಾಣವಾದ ಈ ರೆಸ್ಟೋರೆಂಟ್ ಅನ್ನು ಕೊರೋನಾ ವೈರಸ್ ಕಾಟ ಆರಂಭವಾದಾಗಿನಿಂದ ಮುಚ್ಚಲಾಗಿತ್ತು. ಇದೀಗ ಈ ರೆಸ್ಟೋರೆಂಟ್ ಮತ್ತೆ ಆರಂಭಗೊಳ್ಳಲಿದ್ದು, ಸಾಮಾಜಿಕ ಅಂತರದ ನಿಯಮಗಳ ಕಾರಣ, ಮೊದಲಿದ್ದ 22 ಮಂದಿಯ ಸಾಮರ್ಥ್ಯದ ಜಾಗದಲ್ಲಿ ಕೇವಲ ಮೂವರಿಗೆ ಮಾತ್ರವೇ ಕುಳಿತು ಊಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ರೆಸ್ಟೋರೆಂಟ್ ನಲ್ಲಿ ಕುಳಿತು ತಿನ್ನಲು ಪ್ರತಿಯೊಬ್ಬರಿಗೂ ತಲಾ 25,000ಗಳಷ್ಟು ಖರ್ಚಾಗಲಿದೆ.