ವಾಷಿಂಗ್ ಟನ್ ಸ್ಟೇಟ್ ವಿಶ್ವವಿದ್ಯಾಲಯ ನಡೆಸಿರುವ ಸಮೀಕ್ಷೆಯೊಂದರ ವರದಿ ಹೊರಬಿದ್ದಿದ್ದು, ಪುಟ್ಟ ಪಟ್ಟಣಗಳಲ್ಲಿನ ಮಹಿಳೆಯರು ಸಂಗಾತಿಗಳಿಂದಲೇ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ.
ಸಾಧಾರಣವಾಗಿ ಅಪರಾಧ ಶಾಸ್ತ್ರದ ಪ್ರಕಾರ ಈ ಹಿಂದೆ ಹಳ್ಳಿಯ ಹೆಣ್ಣು ಮಕ್ಕಳು ನಿಕಟ ಸಂಗಾತಿಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು. ಇನ್ನೊಂದೆಡೆ ಅತಿ ಮುಂದುವರಿದ ಮಹಾನಗರಗಳಲ್ಲಿಯೂ ಸಂಗಾತಿಯಿಂದಲೇ ದೌರ್ಜನ್ಯ ನಡೆಯುತ್ತಿತ್ತು.
ಆದರೀಗ ಅತ್ತ ನಗರವೂ ಅಲ್ಲದ, ಹಳ್ಳಿಯೂ ಅಲ್ಲದಂತಹ ಪುಟ್ಟ ಪಟ್ಟಣಗಳಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಉಪನಗರಗಳಲ್ಲೂ ಈ ಪ್ರಮಾಣ ಕಡಿಮೆ ಏನಿಲ್ಲ.
ಆದರೆ, ದೌರ್ಜನ್ಯ ಪ್ರಕರಣಗಳ ಏರುವಿಕೆಗೆ ಕಾರಣಗಳೇನು ಎಂಬುದನ್ನು ಅಧ್ಯಯನ ವರದಿ ಬಹಿರಂಗಪಡಿಸಿಲ್ಲ. ಈ ಕುರಿತು ಅಧ್ಯಯನಕಾರ ಕ್ಯಾಥರೀನ್ ಡುಬಯೋಸ್ ಹೇಳುವಂತೆ, ಮಹಾನಗರಗಳಿಗಿಂತ ಪುಟ್ಟ ಪಟ್ಟಣದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಮಾಣ ಶೇ.27 ರಷ್ಟು ಹೆಚ್ಚಿದ್ದರೆ, ಉಪನಗರಗಳಲ್ಲಿ ಶೇ.42 ಕ್ಕಿಂತ ಹೆಚ್ಚಿದೆ. ಅತ್ತ ಹಳ್ಳಿಯೂ ಅಲ್ಲದ, ಇತ್ತ ಮಹಾನಗರವೂ ಅಲ್ಲದ ಈ ಪ್ರದೇಶಗಳಲ್ಲಿ ಆರ್ಥಿಕ ಹಿನ್ನಡೆ ಇದ್ದೇ ಇರುತ್ತದೆ. ವಿಶೇಷ ಸವಲತ್ತುಗಳು ಸಿಗುವುದಿಲ್ಲ. ಅದರಲ್ಲೂ ದೌರ್ಜನ್ಯ ಪ್ರಕರಣಗಳಲ್ಲಿ ನೆರವು ಪಡೆಯುವ ವ್ಯವಸ್ಥೆಗಳೂ ಅಷ್ಟಕ್ಕಷ್ಟೆ.