ಆಪಲ್ ಕಂಪನಿ ಇತ್ತೀಚೆಗೆ ಐ ಫೋನ್ 12 ಬಿಡುಗಡೆ ಮಾಡಿದ ಸಂದರ್ಭದಲ್ಲಿ ನೆಟ್ಟಿಗರು ತಮಾಷೆಗಳ ಸುರಿಮಳೆಯನ್ನೇ ಹರಿಸಿದ್ದರು. ಕೆಲವರು ಈ ಫೋನ್ನ ಸೌಲಭ್ಯಗಳ ಬಗ್ಗೆ ಮಾತನಾಡುತ್ತಿದ್ದರೆ ಇನ್ನೂ ಹಲವರು ಇದರ ದರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ರು.
ಕೆಲವರು ಬ್ಯಾಂಕ್ ದರೋಡೆ ಮಾಡಬೇಕಾ ಎಂದು ತಮಾಷೆ ಮಾಡಿದ್ದರೆ ಇನ್ನೂ ಹಲವರು ಕಿಡ್ನಿ ಮಾರಾಟ ಮಾಡಿ ಈ ಐಫೋನ್ ಕೊಳ್ಳಬೇಕು ಅಂತಾ ಬರೆದುಕೊಂಡಿದ್ದರು. ಆದರೆ ಈ ಎಲ್ಲಾ ತಮಾಷೆಗಳ ನಡುವೆಯೇ ಚೀನಾದ 25 ವರ್ಷದ ವ್ಯಕ್ತಿಯೊಬ್ಬ ಐಫೋನ್ ಖರೀದಿ ಮಾಡಲು ನಿಜವಾಗಿಯೂ ತನ್ನ ಒಂದು ಕಿಡ್ನಿಯನ್ನ ಮಾರಾಟ ಮಾಡಿದ್ದ .
2011ರಲ್ಲಿ ವಾಂಗ್ ಹೂ ಎಂಬಾತ 17 ವರ್ಷದವನಿದ್ದ ಸಂದರ್ಭದಲ್ಲಿ ಐಫೋನ್ 4 ಹಾಗೂ ಐಪ್ಯಾಡ್ 2 ಖರೀದಿಗಾಗಿ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿದ್ದನಂತೆ. ಅಕ್ರಮವಾಗಿ ತನ್ನ ಕಿಡ್ನಿಯನ್ನ ಯಾರಿಗೋ ಮಾರಿದ್ದ ವಾಂಗ್ ಹೂ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಶಸ್ತ್ರಚಿಕಿತ್ಸೆ ನಡೆದು ಬರೋಬ್ಬರಿ 9 ವರ್ಷದ ಬಳಿಕ ಇದೀಗ ವಾಂಗ್ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ದುಸ್ಥಿತಿಗೆ ಬಂದಿದ್ದಾನೆ. ಆಪರೇಷನ್ ನಡೆದ ಕೆಲವು ದಿನಗಳಲ್ಲೇ ಕಿಡ್ನಿಯಲ್ಲಿ ಸೋಂಕು ಕಂಡು ಬಂದ ಹಿನ್ನೆಲೆ ಇನ್ನೊಂದು ಕಿಡ್ನಿಯೂ ವೈಫಲ್ಯವಾಗಿದೆ. ಹೀಗಾಗಿ ಈತನಿಗೆ ಡಯಾಲಿಸಿಸ್ ಅನಿವಾರ್ಯವಾಗಿದ್ದು ಹಾಸಿಗೆ ಹಿಡಿದಿದ್ದಾನೆ. ಅಕ್ರಮ ಶಸ್ತ್ರ ಚಿಕಿತ್ಸೆ ಆರೋಪದಡಿ 9 ಮಂದಿಯನ್ನ ಬಂಧಿಸಲಾಗಿದೆ.