ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದವರು ಜುಲೈ ತಿಂಗಳಿನಿಂದ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದು ಬುಧವಾರ ದಕ್ಷಿಣ ಕೋರಿಯಾ ಘೋಷಣೆ ಮಾಡಿದೆ. ಜನರಲ್ಲಿ ಲಸಿಕೆ ಪಡೆಯಲು ಪ್ರೇರಣೆ ನೀಡುವ ಸಲುವಾಗಿ ದಕ್ಷಿಣ ಕೋರಿಯಾ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
52 ಮಿಲಿಯನ್ ಜನ ಸಂಖ್ಯೆ ಹೊಂದಿರುವ ದಕ್ಷಿಣ ಕೋರಿಯಾದಲ್ಲಿ 1.9 ಮಿಲಿಯನ್ ಜನತೆ ಮಾತ್ರ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ 70 ಪ್ರತಿಶತ ಲಸಿಕೆ ಅಭಿಯಾನವನ್ನ ಪೂರ್ಣಗೊಳಿಸೋದು ದಕ್ಷಿಣ ಕೋರಿಯಾದ ಗುರಿಯಾಗಿದೆ. ಹೀಗಾಗಿ ಜನರಲ್ಲಿ ಕೊರೊನಾ ಲಸಿಕೆಯನ್ನ ಪಡೆಯುವ ವೇಗ ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ದಕ್ಷಿಣ ಕೋರಿಯಾ ಸರ್ಕಾರ ಈ ಘೋಷಣೆಯನ್ನ ಹೊರಡಿಸಿದೆ ಎಂದು ಪ್ರಧಾನಿ ಕಿಮ್ ಬೂ ಕ್ಯೂಮ್ ಹೇಳಿದ್ದಾರೆ.
ಜುಲೈ ತಿಂಗಳ ಆರಂಭದಿಂದ ಕೊರೊನಾ ಲಸಿಕೆ ಮೊದಲ ಡೋಸ್ ಪಡೆದವರು ಮಾಸ್ಕ್ ಇಲ್ಲದೇ ಓಡಾಡಬಹುದಾಗಿದೆ. ಇದು ಮಾತ್ರವಲ್ಲದೇ ಧಾರ್ಮಿಕ ಕಾರ್ಯಕ್ರಮಗಳ ನಿರ್ಬಂಧ ಹಾಗೂ ಜನಮಿತಿಯಿಂದಲೂ ಇವರಿಗೆ ವಿನಾಯ್ತಿ ಸಿಗಲಿದೆ.