ಹೊಸ ಉದ್ಯೋಗಕ್ಕೆ ನೇಮಕಗೊಂಡ ಬಳಿಕ ಎಲ್ಲರ ಮೆಚ್ಚುಗೆ ಗಳಿಸಬೇಕು ಎಂಬ ವಿಚಾರ ಮೊದಲು ತಲೆಯಲ್ಲಿ ಬರುತ್ತೆ. ಆದರೆ ಜೈಲಿನಲ್ಲಿ ತರಬೇತಿಗಾಗಿ ಸೇರಿಕೊಂಡಿದ್ದ ವ್ಯಕ್ತಿ ಮಾತ್ರ ಈ ಮಾತಿಗೆ ವಿರುದ್ಧವಾದ ಕೆಲಸ ಮಾಡಿ ಪೇಚಿಗೆ ಸಿಲುಕಿದ್ದಾನೆ.
ತನ್ನ ಹೊಸ ಉದ್ಯೋಗದ ಬಗ್ಗೆ ಸ್ನೇಹಿತರ ಬಳಿ ಬಡಾಯಿ ಕೊಚ್ಚಿಕೊಳ್ಳಬೇಕು ಅಂತಾ ಸೆರೆಮನೆಯ ಕೀಗಳ ಫೋಟೋವನ್ನ ವಾಟ್ಸಾಪ್ನಲ್ಲಿ ಸ್ನೇಹಿತರಿಗೆ ಕಳುಹಿಸಿದ್ದಾನೆ.
ಜರ್ಮನಿಯ ಜೈಲೊಂದರಲ್ಲಿ ತರಬೇತಿಗಾಗಿ ಸೇರಿದ್ದ ವ್ಯಕ್ತಿ ಈ ಕೆಲಸ ಮಾಡಿದ್ದಾನೆ. ಜೈಲಿನ ಒಳಗೆ ತಾನಿರುವ ಫೋಟೊಗಳನ್ನ ಸ್ನೇಹಿತರಿಗೆ ಕಳಿಸಿದ್ದಾನೆ. ಈ ಫೋಟೋದಲ್ಲಿ ಆತ ಸೆರೆಮನೆಯ ಎಲ್ಲಾ ಕೀಗಳ ಫೋಟೋವನ್ನೂ ಕಳಿಸಿರೋದಾಗಿ ಹೇಳಿದ್ದಾನೆ.
ಈ ಫೋಟೋದ ಸಹಾಯದಿಂದ ನಕಲಿ ಕೀಗಳನ್ನ ತಯಾರಿಸಬಹುದಾಗಿದೆ. ಹೀಗಾಗಿ ಈ ವ್ಯಕ್ತಿಯ ನಡೆ ಜೈಲಾಧಿಕಾರಿಗಳಿಗೆ ದೊಡ್ಡ ತಲೆನೋವು ತಂದಿದೆ. ಬಳಿಕ ಬೇರೆ ದಾರಿಯಿಲ್ಲದೇ ಜೈಲಿನ ಸೆರೆಮನೆ, ಪ್ರವೇಶ ದ್ವಾರ ಸೇರಿದಂತೆ ಒಟ್ಟು 600 ಕೀಗಳನ್ನ ಬದಲಾಯಿಸಲಾಗಿದೆ.
ಆತ ಕೇವಲ ತನ್ನ ಉದ್ಯೋಗದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲು ಈ ಫೋಟೋ ಕಳಿಸಿದ್ದ. ಆದರೆ ಇದರಿಂದಾಗಿ ಸಂಪೂರ್ಣ ಸೆರೆಮನೆಯ ಕೀಗಳನ್ನೇ ಬದಲಾಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಕೀಗಳನ್ನ ಬದಲಾಯಿಸುವ ಕಾರ್ಯದಲ್ಲಿ 20 ಮಂದಿ ಸಿಬ್ಬಂದಿ ಭಾಗಿಯಾಗಿದ್ದರು. ಎಲ್ಲಾ ಹಳೆಯ ಕೀಗಳನ್ನ ನಾಶ ಮಾಡಲಾಗಿದೆ. ಈ ಎಲ್ಲಾ ಕೀಗಳನ್ನ ಬದಲಾಯಿಸೋಕೆ ಬರೋಬ್ಬರಿ 44 ಲಕ್ಷ ರೂಪಾಯಿ ವ್ಯಯಿಸಲಾಗಿದೆ ಎನ್ನಲಾಗಿದೆ.
ಇನ್ನು ಎಲ್ಲಾ ಸಂಕಷ್ಟಕ್ಕೆ ಕಾರಣನಾದ ವ್ಯಕ್ತಿಯ ತರಬೇತಿಯನ್ನ ಕೊನೆಗೊಳಿಸಿ ಜೈಲಿನಿಂದ ಹೊರಗಟ್ಟಲಾಗಿದೆ.