ಅಮೆರಿಕದ ಎಲ್ಲೆಯೊಳಗೆ ಪ್ರವೇಶಿಸುವ ಯತ್ನದಲ್ಲಿ 18 ಅಡಿ ಎತ್ತರದ ಗೋಡೆಯೊಂದರ ಮೇಲೆ ಸಿಲುಕಿಹಾಕಿಕೊಂಡಿದ್ದ 23 ವರ್ಷದ ಗರ್ಭಿಣಿ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ.
ಹೊಂಡುರಾಸ್‌ನ ಈ ಮಹಿಳೆ ಮೆಕ್ಸಿಕೋದ ಸಿಯುಡಾಡ್ ಜುವಾರೆಝ್ ಎಂಬಲ್ಲಿ ಈ 18 ಅಡಿಯ ಗೋಡೆಯನ್ನು ಒಂದು ಕಡೆಯಿಂದ ಏರಿದ ಬಳಿಕ ಅಮೆರಿಕ ಗಡಿಯ ಕಡೆಯಿಂದ ಇಳಿಯಲು ಸಾಧ್ಯವಾಗಿಲ್ಲ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಕೂಡಲೇ ಮೆಕ್ಸಿಕೋಗೆ ಮತ್ತೆ ರವಾನೆ ಮಾಡಿದ್ದಾರೆ.
ಅಮೆರಿಕದ ವಲಸೆ ರಕ್ಷಣಾ ಏಜೆನ್ಸಿ ಈ ವಿಡಿಯೋ ಬಿಡುಗಡೆ ಮಾಡಿದ್ದು, ಅಗ್ನಿಶಾಮಕ ದಳದ ವಾಹನದ ಏಣಿ ನೆರವಿನಿಂದ ಭದ್ರತಾ ಸಿಬ್ಬಂದಿ ಆ ಮಹಿಳೆಯನ್ನು ತಲುಪಿ, ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಈಗ ತಾಯಿ ಹಾಗೂ ಮಗು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
ಅನಧಿಕೃತವಾಗಿ ಅಮೆರಿಕಕ್ಕೆ ಪ್ರವೇಶ ಮಾಡಿದ ಕಾರಣ ಕಾನೂನಾತ್ಮಕವಾಗಿ ಈಕೆಯನ್ನು ಮೆಕ್ಸಿಕೋಗೆ ಮರಳಿ ಕಳುಹಿಸಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.