ಈಜಿಪ್ಟ್ ರಾಜಧಾನಿ ಕೈರೋ ಹೊರವಲಯದಲ್ಲಿರುವ ಜೋಜರ್ನ್ ಪಿರಾಮಿಡ್ನಲ್ಲಿ ಸೂಕ್ತವಲ್ಲದ ಫೋಟೋಶೂಟ್ ಮಾಡಿದ್ದಾರೆ ಎಂದು ಆರೋಪಿಸಿ ಮಾಡೆಲ್ ಹಾಗೂ ಫೋಟೋಗ್ರಾಫರ್ರನ್ನ ವಶಪಡಿಸಿಕೊಂಡ ಈಜಿಪ್ಟ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದ ಮಂದಿ ಕೋಪಗೊಂಡಿದೆ.
ಮಾಡೆಲ್ ಹಾಗೂ ಫೋಟೋಗ್ರಾಫರ್ರನ್ನ ಅಧಿಕಾರಿಗಳು ಬಿಡುಗಡೆ ಮಾಡಿದ್ದರೂ ಸಹ ನೆಟ್ಟಿಗರ ಕೋಪ ಆರಿದಂತೆ ಕಾಣುತ್ತಿಲ್ಲ.
ಕೈರೋದಿಂದ ದಕ್ಷಿಣಕ್ಕೆ 30 ಕಿಲೋಮೀಟರ್ ದೂರದಲ್ಲಿರುವ ಸಕ್ಕರಾ ನೆಕ್ರೋಪೊಲಿಸ್ನಲ್ಲಿ ನಡೆದ ಶೂಟಿಂಗ್ನಲ್ಲಿ ಮಾಡೆಲ್ ಸಲ್ಮಾ ಅಲ್ಶಿಮಿ ಈಜಿಪ್ಟ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು.
ಆದರೆ ಈ ಫೋಟೋ ಈಜಿಪ್ಟ್ ಸ್ಮಾರಕದ ಘನತೆಗೆ ಭಂಗ ತಂದಿದೆ ಎಂದು ಆರೋಪಿಸಿದ ಈಜಿಪ್ಟ್ ಅಧಿಕಾರಿಗಳು ಸೋಮವಾರ ಮಾಡೆಲ್ ಹಾಗೂ ಫೋಟೋಗ್ರಾಫರ್ನ್ನು ವಶಕ್ಕೆ ಪಡೆದಿದ್ದರು.
ಶಿಮಿ ಬಂಧನದ ಕುರಿತಾದ ವರದಿಗಳು ಎಲ್ಲೆಡೆ ಹರಿದಾಡಿದೆ. ಶಿಮಿ ಆಂಟಿಕ್ವಿಟೀಸ್ ಸಚಿವಾಲಯದ ನಿಯಮ ಉಲ್ಲಂಘಿಸಿದ್ದಾರೆ ಎಂದು ವರದಿಗಳು ಹೇಳಿದ್ದವು. ಮಂಗಳವಾರ ತಲಾ 500 ಈಜಿಪ್ಟ್ ಪೌಂಡ್ ಮೌಲ್ಯದ ಜಾಮೀನಿನಡಿಯಲ್ಲಿ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ. ಆದರೆ ನೆಟ್ಟಿಗರು ಈಜಿಪ್ಟ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಪಿರಾಮಿಡ್ ದೇವಾಲಯವೇನಲ್ಲ, ಅಥವಾ ಪುರಾತನ ವಸ್ತುಗಳಿಗೆ ಹಾನಿ ಮಾಡದೇ ಫೋಟೋ ತೆಗೆದುಕೊಂಡಿದ್ರೆ ಅದರಲ್ಲಿ ತಪ್ಪೇನಿದೆ ಎಂದು ನೆಟ್ಟಿಗರು ಪ್ರಶ್ನೆ ಹಾಕಿದ್ದಾರೆ.