ನೇಪಾಳದ ವಿಮಾನಯಾನ ಸಂಸ್ಥೆಯೊಂದು ಡಿಸೆಂಬರ್ 18ರಂದು ತನ್ನ ಪ್ರಯಾಣಿಕರನ್ನ ತಪ್ಪಾದ ವಿಮಾನ ನಿಲ್ದಾಣದಲ್ಲಿ ಇಳಿಸುವ ಮೂಲಕ ಪ್ರಮಾದವೆಸಗಿದೆ. ಜನಕ್ಪುರಕ್ಕೆ ಟಿಕೆಟ್ ಬುಕ್ ಮಾಡಿದ್ದ 66 ಪ್ರಯಾಣಿಕರು ನಮ್ಮನೇಕೆ ಪೋಖರಾದಲ್ಲಿ ಇಳಿಸಿದ್ದೀರಾ ಎಂದು ಆಶ್ಚರ್ಯ ಹೊರಹಾಕಿದ್ದಾರೆ.
ದೇಶಿ ವಿಮಾನಯಾನ ಸಂಸ್ಥೆಯಾದ ಬುದ್ಧ ಏರ್ ಡಿಸೆಂಬರ್ 18ರಂದು ಕಾಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ದೇಶದ ಎರಡನೇ ಅತಿದೊಡ್ಡ ನಗರವಾದ ಪೋಖರಾದಲ್ಲಿ ಲ್ಯಾಂಡ್ ಆಗಿದೆ. ಆದರೆ ವಿಚಿತ್ರ ಅಂದರೆ ಈ ವಿಮಾನದ ಕೊನೆಯ ನಿಲ್ದಾಣ ದೇಶದ ದಕ್ಷಿಣ ಭಾಗದಲ್ಲಿರುವ ಜನಕ್ಪುರವಾಗಿತ್ತು. ಈ ಎರಡು ನಗರಗಳು 400 ಕಿಮೀಗಿಂತಲೂ ಹೆಚ್ಚು ಅಂತರವನ್ನ ಹೊಂದಿವೆ.
ಸಂವಹನ ಕೊರತೆಯಿಂದಾಗಿ ಈ ಪ್ರಮಾದ ಸಂಭವಿಸಿದೆ ಎಂದು ವಿಮಾನಯಾನ ಕಾರ್ಯನಿರ್ವಾಹಕ ಅಧಿಕಾರಿ ಅಸ್ನಾ ಬಾಸ್ನೆಟ್ ಮಾಹಿತಿ ನೀಡಿದ್ರು. ಕೂಡಲೇ ಏರ್ಲೈನ್ ಸಂಸ್ಥೆ ಪ್ರಯಾಣಿಕರು ಜನಕ್ಪುರ ತಲುಪಲು ವ್ಯವಸ್ಥೆ ಮಾಡಿದ್ದು ಪರಿಸ್ಥಿತಿ ತಿಳಿಯಾಗಿದೆ.