ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿ 46ನೇ ಅಧ್ಯಕ್ಷರಾಗಿ ಬಿಡೆನ್ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಕೂಡ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಶನಿವಾರ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಬಿಡೆನ್-ಹ್ಯಾರಿಸ್ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.
ಒಂದು ಕಡೆ ಡೆಮಾಕ್ರಟಿಕ್ ಪಕ್ಷಕ್ಕೆ ರಾಜಕಾರಣಿಗಳು, ಸಿನಿ ತಾರೆಯರು, ಕ್ರೀಡಾಪಟುಗಳು, ಸಾಮಾನ್ಯ ಜನತೆ ಶುಭ ಕೋರುತ್ತಿದ್ರೆ ಇನ್ನೊಂದು ಕಡೆ ಟ್ರಂಪ್ ಬೆಂಬಲಿಗರು ಟ್ರೋಲ್, ಮೀಮ್ಸ್ ಮಾಡೋದ್ರಲ್ಲಿ ಬ್ಯುಸಿಯಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಕಂಡು ಬಂದಿವೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಸಿಎನ್ಎನ್ ನಿರೂಪಕ ಕಣ್ಣೀರು ಹಾಕಿದ ದೃಶ್ಯವೊಂದು ಕಂಡುಬಂತು. ಲೈವ್ನಲ್ಲೇ ಭಾವುಕರಾದ ವಾನ್ ಜೋನ್ಸ್, ಇಂದು ಬೆಳಗ್ಗೆ ಪೋಷಕರ ಸ್ಥಾನದಲ್ಲಿ ನಿಲ್ಲೋದು ಸುಲಭ ಎನಿಸುತ್ತಿದೆ. ವ್ಯಕ್ತಿತ್ವ ಎಷ್ಟು ಮುಖ್ಯ ಎಂದು ಮಕ್ಕಳಿಗೆ ತಿಳಿಸೋದು ಸುಲಭ ಎನಿಸುತ್ತಿದೆ. ಅಲ್ಲದೇ ಸತ್ಯ ಎಷ್ಟು ಮುಖ್ಯ ಅನ್ನೋದನ್ನೂ ಅವರಿಗೆ ಕಲಿಸಿ ಎಂದು ಹೇಳಿದ್ದಾರೆ.
ಇತ್ತ ಬಿಡೆನ್ ಚುನಾವಣೆ ವಿಜಯದ ವರದಿ ಮಾಡುತ್ತಿದ್ದ ನ್ಯೂಸ್ 12ನ ವರದಿಗಾರ ಅಲೆಕ್ಸ್ ಲೈವ್ನಲ್ಲಿ ಜನರ ಪ್ರತಿಕ್ರಿಯೆಗಳನ್ನ ಸಂಗ್ರಹಿಸುತ್ತಿದ್ದರು. ಈ ವೇಳೆ ಟ್ರಂಪ್ ಅಭಿಯಾನದ ಟೀ ಶರ್ಟ್ ಹಾಕಿದ್ದ ವ್ಯಕ್ತಿಯನ್ನ ನಿಲ್ಲಿಸಿದ ಅಲೆಕ್ಸ್ ಪ್ರತಿಕ್ರಿಯೆ ಕೇಳಿದ್ದಾರೆ. ಆದರೆ ಆ ವ್ಯಕ್ತಿ ಲೈವ್ನಲ್ಲಿ ವರದಿಗಾರನ ವಿರುದ್ಧ ಆಕ್ರೋಶ ಹೊರಹಾಕಿ ನಡೆದಿದ್ದಾರೆ.