ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ನಾರ್ವೆ ದೇಶದ ಪೊಲೀಸರು ಸ್ವತಃ ಅಲ್ಲಿನ ಪ್ರಧಾನಿ ಎರ್ನಾ ಸೋಲ್ಬರ್ಗ್ಗೆ ದಂಡವನ್ನ ವಿಧಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮಾಚರಣೆ ನಿಮಿತ್ತ ಮನೆಯಲ್ಲೇ ಸಣ್ಣ ಔತಣಕೂಟ ಏರ್ಪಡಿಸಿದ್ದ ಪ್ರಧಾನಿ ಎರ್ನಾ ಸಾಮಾಜಿಕ ಅಂತರವನ್ನ ಉಲ್ಲಂಘಿಸಿದ್ದರು.
ನಾರ್ವೆ ಪ್ರಧಾನಿ ಎರ್ನಾ ಸೋಲ್ಬರ್ಗ್ರಿಂದ ದಂಡದ ರೂಪದಲ್ಲಿ 175764.25 ರೂಪಾಯಿ ವಸೂಲಿ ಮಾಡಲಾಗಿದೆ ಎಂದು ನಾರ್ವೆ ಪೊಲೀಸ್ ಮುಖ್ಯಸ್ಥ ಒಲೆ ಸವೆರುಡ್ ಮಾಹಿತಿ ನೀಡಿದ್ರು.
ಎರಡು ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಎರ್ನಾ ತಮ್ಮ 60ನೇ ವರ್ಷದ ಜನ್ಮದಿನದ ಪ್ರಯುಕ್ತ 13 ಮಂದಿ ಕುಟುಂಬಸ್ಥರಿಗೆ ಔತಣ ಕೂಟವನ್ನ ಏರ್ಪಡಿಸಿದ್ದರು. ಆದರೆ ಕೊರೊನಾ ವೈರಸ್ ಸೋಂಕು ಹರಡುವಿಕೆ ತಪ್ಪಿಸುವುದಕ್ಕೋಸ್ಕರ ನಾರ್ವೆಯಲ್ಲಿ 10ಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರೋದನ್ನ ನಿರ್ಬಂಧಿಸಲಾಗಿದೆ.
ಇಂತಹ ಹೆಚ್ಚಿನ ಪ್ರಕರಣದಲ್ಲಿ ಪೊಲೀಸರು ದಂಡ ವಿಧಿಸೋದಿಲ್ಲವಾದರೂ ಸಹ ನಿರ್ಬಂಧಗಳನ್ನ ರೂಪಿಸುವ ಸರ್ಕಾರದ ಮುಖ್ಯಸ್ಥರೇ ಈ ರೀತಿ ಮಾಡೋದು ತಪ್ಪು ಎಂಬ ಕಾರಣಕ್ಕೆ ಫೈನ್ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳುವ ಮೂಲಕ ಪ್ರಧಾನಿಗೆ ದಂಡ ಹಾಕಿದ್ದನ್ನ ಸಮರ್ಥಿಸಿಕೊಂಡಿದ್ದಾರೆ.