ಮಗ್ ಬಿಯರ್ ಹಿಡಿದ ‘ಟು ಲಾಫಿಂಗ್ ಬಾಯ್ಸ್’ (ಇಬ್ಬರು ನಗುವ ಹುಡುಗರು) ಅತ್ಯಾಕರ್ಷಕ ಪೇಂಟಿಂಗ್ ಒಂದು ಸತತ ಮೂರನೇ ಬಾರಿಗೆ ವಸ್ತು ಸಂಗ್ರಹಾಲಯದಿಂದ ಕಳುವಾಗಿದೆ.
ಡಚ್ ನ ಪ್ರಖ್ಯಾತ ಚಿತ್ರ ಕಲಾವಿದ ಫ್ರಾನ್ಸ್ ಹಾಲ್ಸ್ ರಚಿಸಿದ ವರ್ಣ ಚಿತ್ರ ಇದಾಗಿದ್ದು, 17 ನೇ ಶತಮಾನದಲ್ಲಿ ರಚನೆಗೊಂಡಿದೆ.
ಇಬ್ಬರು ನಗುವ ಹುಡುಗರನ್ನು ಒಳಗೊಂಡ ಈ ವರ್ಣಚಿತ್ರವನ್ನು 1988 ಮತ್ತು 2011ರಲ್ಲಿ ಇದೇ ವಸ್ತು ಸಂಗ್ರಹಾಲಯದಿಂದ ಕಳುವು ಮಾಡಲಾಗಿತ್ತು. ಮೊದಲ ಬಾರಿ ಮೂರು ವರ್ಷದ ಬಳಿಕ, ಎರಡನೇ ಬಾರಿ ಆರು ತಿಂಗಳ ಬಳಿಕ ಪೊಲೀಸರು ಅದನ್ನು ಪತ್ತೆ ಮಾಡಿ ವಸ್ತು ಸಂಗ್ರಹಾಲಯಕ್ಕೆ ಒಪ್ಪಿಸಿದ್ದರು.
ಈ ಬಾರಿ ಕಳ್ಳತನವು ನಸುಕಿನ 3.30 ರ ವೇಳೆಗೆ ನಡೆದಿದೆ. ವಸ್ತು ಸಂಗ್ರಹಾಲಯದ ಅಲರಾಮ್ ಹೊಡೆದುಕೊಳ್ಳುತ್ತಿದ್ದಂತೆ ಅಧಿಕಾರಿಗಳು ಧಾವಿಸಿ ಬಂದಿದ್ದಾರೆ, ಆದರೆ ಶಂಕಿತರನ್ನು ಕಂಡುಹಿಡಿಯಲು ವಿಫಲರಾಗಿದ್ದಾರೆ.