ಅಮೆರಿಕದ ಖ್ಯಾತ ಗಾಯಕ 21 ವರ್ಷದ ಲಿಲ್ ನಾಸ್ ಎಕ್ಸ್ ಕೆಲ ದಿನಗಳ ಹಿಂದಷ್ಟೇ ಹೊಸ ಮ್ಯೂಸಿಕ್ ವಿಡಿಯೋ ರಿಲೀಸ್ ಮಾಡಿ ಸುದ್ದಿಯಾಗಿದ್ದರು. ಇದೀಗ ಓಲ್ಡ್ ಟೌನ್ ರೋಡ್ ಖ್ಯಾತಿಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ, ಸ್ಯಾಟನ್ ಶೂ ವಿಚಾರದಲ್ಲಿ ಹೊಸ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ.
ಬ್ರೂಕ್ಲಿನ್ ಮೂಲದ ಕಂಪನಿಯ ಸಹಭಾಗಿತ್ವದಲ್ಲಿ 666 ಸ್ಯಾಟನ್ ಶೂಗಳನ್ನ ತಯಾರಿಸಲು ಸಹಕರಿಸಲಿದ್ದೇನೆ ಎಂದು ರ್ಯಾಪರ್ ಘೋಷಣೆ ಮಾಡಿದ್ದರು. ಕಪ್ಪುಬಣ್ಣದ ನೈಕಿ ಏರ್ ಮ್ಯಾಕ್ಸ್ ಶೂ ಇದೀಗ ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ಕೆಂಪು ಬಣ್ಣಕ್ಕಾಗಿ ಮಾನವನ ರಕ್ತದ ಒಂದು ಹನಿ ಬೆರಸಲಾಗಿದೆ ಎಂದು ಹೇಳಲಾಗಿದ್ದು ಮಾತ್ರವಲ್ಲದೇ ಬೈಬಲ್ನ ಕೆಲ ಪವಿತ್ರ ಶಬ್ದಗಳು ಮತ್ತು ಪೆಂಟಗ್ರಾಮ್ ಚಿಹ್ನೆಯನ್ನ ಇಡಲಾಗಿದೆ. ಇದು ಬೈಬಲ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ನೈಕಿ ಅಭಿಯಾನ ಶುರುವಾಗ್ತಿದ್ದಂತೆಯೇ ಈ ವಿಚಾರವಾಗಿ ನೈಕಿ ಸ್ಪಷ್ಟನೆ ನೀಡಿದ್ದು, ಈ ಯೋಜನೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಹೇಳಿದೆ. ಈ ಶೂಗಳು ಸೋಮವಾರ ವ್ಯಾಪಕವಾಗಿ ಮಾರಾಟವಾಗಿದೆ. ಒಂದು ಜೋಡಿ ಶೂಗೆ 1018 ಡಾಲರ್ ರೂಪಾಯಿ ಮೌಲ್ಯವಿದೆ. ಇದೀಗ ನೈಕಿ ಕಂಪನಿ ಇದರ ವಿರುದ್ದ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಪ್ರಕರಣ ಯಾವ ತಿರುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.