ಕಚೇರಿಯ ಮನೆಗೆಲಸದಿಂದ ಆದ ಅಡಾವುಡಿ ಅಷ್ಟಿಷ್ಟಲ್ಲ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಕಥೆ.
ಅದರಲ್ಲೂ ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ ಹಲವು ರೀತಿಯ ಪ್ರಸಂಗಗಳು ನಡೆದು, ನಗೆಯ ಪಟಾಕಿ ಸಿಡಿಸಿದ್ದುಂಟು.
ಆನ್ ಲೈನ್ ತರಗತಿ ನಡೆಯುವಾಗ ಮಗುವಿನ ತಂದೆ ಅಂಗಿಯೇ ಇಲ್ಲದೆ ಅಡ್ಡಾಡಿದ್ದು, ಕ್ಲಾಸ್ ಮುಗಿದ ಮೇಲೆ ಟೀಚರ್, ಗೆಳೆಯರಿಂದ ಆದ ತಮಾಷೆ, ಮನೆಯಲ್ಲಿನ ನಿತ್ಯದ ಸಂಗತಿಗಳು ಕಚೇರಿಯ ಸಿಬ್ಬಂದಿ ಕಣ್ಣೆದುರೇ ಕಾಣುವಂತಾಗಿದೆ.
ಅದೇ ರೀತಿ ಬಿಬಿಸಿ ವಾಹಿನಿಯಲ್ಲಿ ಡಾ.ಕ್ಲಾರೆ ವೆನ್ ಹ್ಯಾಮ್ ಅವರನ್ನು ನಿರೂಪಕ ಕ್ರಿಶ್ಚಿಯನ್ ಫ್ರೇಸರ್ ಸಂದರ್ಶನ ಮಾಡುತ್ತಿರುತ್ತಾರೆ. ಕೊರೋನಾ ಪರಿಣಾಮ, ಲಾಕ್ ಡೌನ್ ಪರಿಣಾಮಗಳ ಬಗ್ಗೆ ಸಂದರ್ಶನ ನಡೆಯುತ್ತಿರುವಾಗ ಮಗಳು ಸ್ಕಾರ್ಲೆಟ್ ಸಹ ವಿಡಿಯೋದಲ್ಲಿ ಕಾಣಿಸುತ್ತಿರುತ್ತಾಳೆ.
ಕೈಗೆಟುಕದ ಅಲ್ಮೇರ ಮೇಲೆ ಚಿತ್ರಪಟವೊಂದನ್ನು ಇಡುವ ಸಲುವಾಗಿ ತುದಿಗಾಲ ಮೇಲೆ ನಿಂತು ಸರ್ಕಸ್ ಮಾಡುತ್ತಿದ್ದ ಸ್ಕಾರ್ಲೆಟ್ ಕೂಡ ವಿಡಿಯೋದಲ್ಲಿ ಬರುತ್ತಿರುವುದನ್ನ ಗಮನಿಸಿದ ನಿರೂಪಕ, ಆಕೆಯ ಹೆಸರೇನೆಂದು ಕೇಳುತ್ತಾರೆ. ಸ್ಕಾರ್ಲೆಟ್ ಎನ್ನುತ್ತಿದ್ದಂತೆ, ಆಕೆಯೂ ಇಂದಿನ ಸುದ್ದಿಯಲ್ಲಿ ಬರಲಿದ್ದಾಳೆ ಎನ್ನುತ್ತಾನೆ.
ತನ್ನ ಬಗ್ಗೆ ಯಾರೋ ಮಾತನಾಡುತ್ತಿದ್ದಾರಲ್ಲಾ ಎಂಬುದು ಕಿವಿಗೆ ಬೀಳುತ್ತಿದ್ದಂತೆ, ಲ್ಯಾಪ್ ಟಾಪ್ ಬಳಿ ಬಂದ ಸ್ಕಾರ್ಲೆಟ್, ಅಮ್ಮ ಅವರ ಹೆಸರೇನು ಎಂದು ಮುದ್ದಾಗಿ ಕೇಳುತ್ತಾಳೆ. ಇದನ್ನು ಕೇಳಿಸಿಕೊಂಡ ನಿರೂಪಕ, ನನ್ನ ಹೆಸರು ಕ್ರಿಶ್ಚಿಯನ್ ಎನ್ನುತ್ತಾನೆ. ಸಂದರ್ಶನದ ಕೊನೆಯಲ್ಲಿ ಕ್ಲಾರೆ ಅವರೇ ಕ್ಷಮೆ ಕೇಳುತ್ತಾರೆ. ಆದರೆ, ಮಗುವಿನ ಮುದ್ದಾದ ಪ್ರಶ್ನೆ ಇರುವ ವಿಡಿಯೋವನ್ನು ಸ್ವತಃ ಬಿಬಿಸಿಯೇ ಟ್ವೀಟ್ ಮಾಡಿದ್ದು, ವೈರಲ್ ಆಗಿದೆ. ಮನೆಯಿಂದಲೇ ಕೆಲಸ ಮಾಡಿದರೆ ಎಷ್ಟೆಲ್ಲ ಪ್ರಯಾಸವಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.