ಮಿಚಿಗನ್: ಇತ್ತೀಚೆಗೆ ಯಾರು ಯಾರಿಗೂ ಪೋಸ್ಟ್ ಕಾರ್ಡ್ ಬರೆಯುವುದಿಲ್ಲ. ಆದರೆ, ಮಹಿಳೆಯೊಬ್ಬಳ ಮೇಲ್ ಬಾಕ್ಸ್ ಗೆ ಪೋಸ್ಟ್ ಕಾರ್ಡ್ ಒಂದು ಈಚೆಗೆ ಬಂದು ಬಿದ್ದಿತ್ತು. ಇನ್ನೂ ವಿಶೇಷ ಎಂದರೆ, ಅದು ಶತಮಾನದ ಹಿಂದಿನ ಪೋಸ್ಟ್ ಕಾರ್ಡ್.
ಹೌದು, ಬ್ರಿಟ್ನಿ ಕೀಚ್ ಅವರ ಮನೆಯ ಸರಿಯಾದ ವಿಳಾಸವಿರುವ ಆದರೆ, ರಾಯ್ ಮೆಕ್ವೀನ್ ಎಂಬುವವರ ಹೆಸರಿರುವ, ಅಕ್ಟೋಬರ್ 29, 1920 ನೇ ದಿನಾಂಕದ ಪೋಸ್ಟ್ ಕಾರ್ಡ್ ಬಂದಿದೆ. ಕಾರ್ಡ್ ನಲ್ಲಿ ಪ್ಲೋಸಿನ್ ಬುರ್ಜಸ್ ಎಂಬುವವರು ಸಹಿ ಮಾಡಿದ್ದಾರೆ.
ಕಾಗದದಲ್ಲಿ “ಸಹೋದರರೇ ನೀವು ಕ್ಷೇಮವೇ..? ನಾನು ಇಲ್ಲಿ ಕ್ಷೇಮವಾಗಿದ್ದೇನೆ. ಆದರೆ, ಅಮ್ಮನ ಕಾಲು ಮಂಡಿಯ ನೋವು ವಿಪರೀತವಾಗಿದೆ. ಇಲ್ಲಿ ಭಾರಿ ಚಳಿ ಬೀಳುತ್ತಿದೆ. ನನ್ನ ಇತಿಹಾಸದ ಪಾಠ ಮುಗಿಸಿದ್ದೇನೆ. ನನ್ನ ತಂದೆ ನಿಮ್ಮನ್ನು ವಿಚಾರಿಸಿದ್ದಾರೆ. ತಾಯಿ ನಿಮ್ಮ ವಿಳಾಸ ತಿಳಿಸಿದರು. ರೊಯ್ ಪ್ಯಾಂಟ್ ಕೊಂಡಿದ್ದು, ಇದುವರೆಗೂ ಅವನಿಗೆ ಅದು ಸರಿ ಹೊಂದುತ್ತಿಲ್ಲ. ಅಜ್ಜ, ಅಜ್ಜಿ ಆರೋಗ್ಯವಾಗಿದ್ದಾರೆಂದು ಭಾವಿಸಿದ್ದೇನೆ. ಪತ್ರ ಬರೆಯಲು ಮರೆಯಬೇಡಿ” ಎಂದು ಬರೆಯಲಾಗಿದೆ.
ಹಾಲೋವಿನ್ ಮಾದರಿಯ ಪೋಸ್ಟ್ ಕಾರ್ಡ್ ಇದಾಗಿದ್ದು, ಪೊರಕೆ ಹಿಡಿದ ಕಪ್ಪು ಬೆಕ್ಕಿನ ಫೋಟೋ, ಒಬ್ಬ ಮಹಿಳೆ, ಹಂಸ ಹಾಗೂ ಗೂಬೆಯ ಚಿತ್ರವಿದೆ. ಜಾರ್ಜ್ ವಾಷಿಂಗ್ಟನ್ ಅವರ ಸ್ಟಾಂಪ್ ಹಚ್ಚಲಾಗಿದೆ.
ಮಹಿಳೆ ಪೋಸ್ಟ್ ಕಾರ್ಡ್‌ನ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದು, “ಈ ಪತ್ರಕ್ಕೆ ಸಂಬಂಧಿಸಿದವರು ಯಾರಾದರೂ ಇದ್ದರೆ ಇದನ್ನು ಪಡೆಯಲಿ” ಎಂದಿದ್ದಾರೆ. “ಮೊದಲು ನಾನು ಇದನ್ನು ಗಂಭೀರವಾಗಿ ನೋಡಿರಲಿಲ್ಲ. ನಂತರ ದಿನಾಂಕ ನೋಡಿ ಶತಮಾನದ ಹಿಂದಿನದ್ದು ಎಂಬುದು ಅಚ್ಚರಿಯಾಯಿತು” ಎಂದು ಬ್ರಿಟ್ನಿ ಹೇಳಿದ್ದಾರೆ.